ವಾಷಿಂಗ್ಟನ್ ನ. 3: ಅಮೆರಿಕಾದ ಅಧ್ಯಕ್ಷೀಯ ಚುನಾವಣೆ ಭಾರತೀಯ ಕಾಲಮಾನದ ಪ್ರಕಾರ ಇಂದು ಸಂಜೆ 4.30 ಕ್ಕೆ ಆರಂಭವಾಗುತ್ತದೆ. ಈ ವಿಚಾರ ಜಾಗತಿಕ ಮಟ್ಟದಲ್ಲಿ ತೀವ್ರ ಚರ್ಚೆಯಲ್ಲಿದೆ. ಮರು ಆಯ್ಕೆ ಬಯಸಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡೆನ್ ಅವರ ಭವಿಷ್ಯ ಶೀಘ್ರದಲ್ಲೇ ಹೊರಬೀಳಲಿದೆ. ಈವರೆಗೆ 9.30 ಕೋಟಿಗೂ ಹೆಚ್ಚು ಜನರು ಮತ ಚಲಾವಣೆ ಮಾಡಿದ್ದಾರೆ.
ಪ್ರಚಾರದ ಕೊನೆಯ ದಿನ ಟ್ರಂಪ್ ಉತ್ತರ ಕೆರೊಲಿನಾದಿಂದ ವಿಸ್ಕಾನ್ಸಿನ್ ನಡುವೆ 5 ರ್ಯಾಲಿಗಳನ್ನು ನಡೆಸಿದ್ದಾರೆ. ಇನ್ನೊಂದೆಡೆ ಬಿಡೆನ್ ಅವರು ತಮ್ಮ ಹೆಚ್ಚಿನ ಸಮಯವನ್ನು ಪೆನ್ಸಿಲ್ವೇನಿಯಾದ ಮತದಾರರ ಮೇಲೆ ಕೇಂದ್ರೀಕರಿಸಿದ್ದಾರೆ. ಅಲ್ಲಿ ಕಳೆದ ಬಾರಿ ಟ್ರಂಪ್ ಅತ್ಯಲ್ಪ ಅಂತರದಿಂದ ಜಯಗಳಿಸಿದ್ದರು. ಹೀಗಾಗಿ ಅಲ್ಲಿ ಜಯ ಸಾಧಿಸಿದರೆ ಟ್ರಂಪ್ ಹಾದಿ ಮತ್ತಷ್ಟು ಕಠಿಣವಾಗಲಿದೆ ಎಂಬುದು ಬಿಡೆನ್ ಲೆಕ್ಕಾಚಾರವಾಗಿದೆ. ಜತೆಗೆ ಟ್ರಂಪ್ ಗೆಲುವಿಗೆ ನಿರ್ಣಾಯಕ ರಾಜ್ಯಗಳಾದ ಓಹಿಯೊ, ಅಯೋವಾ, ಟೆಕ್ಸಾಸ್ ಮತ್ತು ಜಾರ್ಜಿಯಾದಲ್ಲಿ ಇತ್ತೀಚೆಗೆ ಡೆಮಾಕ್ರಟಿಕ್ ಹೆಚ್ಚು ಜನಪ್ರಿಯತೆ ಪಡೆದಿದೆ. ಅಲ್ಲಿ ಬಿಡೆನ್ ಪರವಾಗಿ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಪ್ರಚಾರ ನಡೆಸಿದ್ದಾರೆ.
ಅಧ್ಯಕ್ಷೀಯ ಚುನಾವಣೆಯ ಜತೆಗೆ ಸೆನೆಟ್ನ 100 ಸ್ಥಾನಗಳ ಪೈಕಿ 35ಕ್ಕೆ ಹಾಗೂ 435 ಬಲದ ಜನಪ್ರತಿನಿಧಿ ಸಭೆಗೆ (ಹೌಸ್ ಆಫ್ ರೆಪ್ರಸೆಂಟಟೀವ್ಸ್) ಮತದಾನ ನಡೆಯುತ್ತಿದೆ. ಇದರೊಟ್ಟಿಗೆ 11 ರಾಜ್ಯಗಳ ಗವರ್ನರ್ ಹುದ್ದೆಗೂ ಚುನಾವಣೆ ನಡೆಯುತ್ತಿದೆ. ‘ಎರಡೂ ಪಕ್ಷಗಳ ಅಧ್ಯಕ್ಷೀಯ ಮತ್ತು ಉಪಾಧ್ಯಕ್ಷೀಯ ಅಭ್ಯರ್ಥಿಗಳ ಮಧ್ಯೆ 3 ಸುತ್ತಿನ ಡಿಬೇಟ್ ನಡೆದು ದೇಶದ ಭವಿಷ್ಯದ ನಿರ್ಣಾಯವಾಗಲಿದೆ.