ಮೈಸೂರು: ‘ಕಟ್ಟಡ ಕಾರ್ಮಿಕರು ತಮ್ಮ ಕೆಲಸದ ನಿಮಿತ್ತ ರಾಜ್ಯದ ವಿವಿಧೆಡೆ ಸಂಚರಿಸಲು ಅನುಕೂಲವಾಗುವಂತೆ ನಿಗಮದಿಂದ ಉಚಿತವಾಗಿ ಬಸ್ ಪಾಸ್ ನೀಡಲಾಗುವುದು’ ಎಂದು ಕೆಎಸ್ಆರ್ಟಿಸಿ ಅಧ್ಯಕ್ಷ ಎಂ.ಚಂದ್ರಪ್ಪ ತಿಳಿಸಿದರು.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪ್ರಾಯೋಗಿಕವಾಗಿ ಈ ಯೋಜನೆ ಸದ್ಯಕ್ಕೆ ಮೈಸೂರು ಜಿಲ್ಲೆಯಲ್ಲಿನ 60,600 ಕಟ್ಟಡ ಕಾರ್ಮಿಕರಿಗೆ ಅನುಷ್ಠಾನಗೊಳಿಸಲಾಗುತ್ತದೆ. ನಂತರದ ದಿನಗಳಲ್ಲಿ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು. ಕೋವಿಡ್ನಿಂದ ತತ್ತರಿಸಿರುವ ಕೂಲಿ ಕಾರ್ಮಿಕರಿಗೆ ನೆರವಾಗಲಿಕ್ಕಾಗಿ ಈ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಇದರಿಂದ ಕೂಲಿ ಕಾರ್ಮಿಕರು ತಮ್ಮ ಕೆಲಸ ಕಾರ್ಯಗಳಿಗಾಗಿ ಜಿಲ್ಲೆಯಿಂದ ಜಿಲ್ಲೆಗೆ ಉಚಿತವಾಗಿ ಪ್ರಯಾಣಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಲಾಕ್ಡೌನ್ನಿಂದಾಗಿ ಕೆಎಸ್ಆರ್ಟಿಸಿಗೆ ₹ 1,600 ಕೋಟಿ ನಷ್ಟವಾಗಿದೆ. ಪ್ರಯಾಣಿಕರ ಅಗತ್ಯತೆಗೆ ಅನುಸಾರವಾಗಿ ನಾಡಹಬ್ಬ ದಸರಾ ಮಹೋತ್ಸವಕ್ಕೆ ಮೈಸೂರು ಗ್ರಾಮಾಂತರ ಭಾಗದಿಂದ 70 ಹಾಗೂ ನಗರ ವಿಭಾಗದಿಂದ 20 ಕೆಎಸ್ಆರ್ಟಿಸಿ ಬಸ್ ಸೇವೆ ಒದಗಿಸಲಾಗುವುದು. ಲಾಭದ ಹಿತಾಸಕ್ತಿಗಿಂತ ಸಾರ್ವಜನಿಕರ ಸೇವೆಗೆ ಒತ್ತು ನೀಡುತ್ತೇವೆ’ ಎಂದು ಚಂದ್ರಪ್ಪ ತಿಳಿಸಿದರು.