ವಿಶ್ವದ ಅಗ್ರಮಾನ್ಯ ಶ್ರೀಮಂತರ ಸಾಲಿನಲ್ಲಿ ಜಗತ್ತಿನ ಗಮನ ಸೆಳೆದಿರುವ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಕೇಶ್ ಅಂಬಾನಿ ವಿಶ್ವದ 5ನೇ ಶ್ರೀಮಂತ ವ್ಯಕ್ತಿಯಾಗಿ ಹೊರ ಹೊಮ್ಮಿದ್ದಾರೆ.
ಉದ್ಯಮ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿರುವ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಸಂಸ್ಥೆಯ ಮೇಲೆ ವಿದೇಶಿ ಸಂಸ್ಥೆಗಳು ನಿರಂತರವಾಗಿ ಹೂಡಿಕೆ ಮಾಡುತ್ತಿವೆ. ಇದರ ಪರಿಣಾಮ, ಮುಖೇಶ್ ಅಂಬಾನಿ ಅವರ ಸಂಪತ್ತು ಒಂದೇ ದಿನ 2.12 ಶತಕೋಟಿ ಡಾಲರ್ ಏರಿಕೆಯಾಗಿದೆ. ಇದರಿಂದಾಗಿ ಮುಖೇಶ್ ಅಂಬಾನಿ ವಿಶ್ವದ ಸಿರಿವಂತರ ಸಾಲಿನಲ್ಲಿ 5ನೇ ಸ್ಥಾನಕ್ಕೇರಿದ್ದಾರೆ. ಆ ಮೂಲಕ ಗೂಗಲ್ ಸಂಸ್ಥಾಪಕ ಲ್ಯಾರಿ ಪೇಜ್ ಮತ್ತು ಅಮೆರಿಕಾದ ಕೊಡುಗೈದಾನಿ ವಾರೆನ್ ಭಪೆಟ್ ಅವರನ್ನು ಅಂಬಾನಿ ಹಿಂದಿಕ್ಕಿದ್ದಾರೆ.
ಫೋರ್ಬ್ಸ್ನ ರಿಯಲ್ ಟೈಮ್ ಡೇಟಾದಲ್ಲಿ ಈ ಮಾಹಿತಿ ಲಭ್ಯವಾಗಿದೆ. ಸದ್ಯ ಅಂಬಾನಿ ಆಸ್ತಿ 5,59,734 ಕೋಟಿ ರೂಪಾಯಿ ಆದರೆ, ನಾಲ್ಕನೇ ಸ್ಥಾನದಲ್ಲಿರುವ ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್ ಆಸ್ತಿ ಮೌಲ್ಯ 6,64,263 ಕೋಟಿ ರೂಪಾಯಿ ಆಗಿದೆ. ಅಮೆಜಾನ್ ಸ್ಥಾಪಕ ಮತ್ತು ಸಿಇಒ ಜೆಫ್ ಬೆಜೋಸ್ ಶ್ರೀಮಂತರ ಸಾಲಿನಲ್ಲಿ ಮೊದಲಿದ್ದಾರೆ. ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಎರಡನೇ ಸ್ಥಾನದಲ್ಲಿದ್ದಾರೆ. LVMH ಸಂಸ್ಥೆಯ ಒಡೆಯ ಬರ್ನಾಟ್ ಅರ್ನಾಡ್ ಮೂರನೇ ಸ್ಥಾನದಲ್ಲಿದ್ದರೆ, ಫೇಸ್ಬುಕ್ ಸ್ಥಾಪಕ ಮಾರ್ಕ್ ಜುಕರ್ಬರ್ಗ್ ನಾಲ್ಕನೇ ಸ್ಥಾನದಲ್ಲಿ ಹಾಗೂ ಅಂಬಾನಿ ಐದನೇ ಸ್ಥಾನದಲ್ಲಿದ್ದಾರೆ.
ಸತತವಾಗಿ ಜಿಯೋ ಸಂಸ್ಥೆಯ ಮೇಲೆ ಹೂಡಿಕೆ ಆದ ಬೆನ್ನಲ್ಲೇ ರಿಲಾಯನ್ಸ್ ಷೇರುಗಳ ಮೌಲ್ಯ ದ್ವಿಗುಣವಾಗಿದೆ. ಹೀಗಾಗಿ ಅಂಬಾನಿ ಆಸ್ತಿ ಮೌಲ್ಯ ಹೆಚ್ಚಿದೆ. ಈ ಮೊದಲು ಅಂಬಾನಿ ವಿಶ್ವದ ಏಳನೇ ಶ್ರೀಮಂತರಾಗಿದ್ದರು. ಇತ್ತೀಚೆಗೆ ಅವರು ಆರನೇ ಸ್ಥಾನಕ್ಕೆ ಜಿಗಿದಿದ್ದರು.