ಕ್ಯಾಲಿಫೋರ್ನಿಯಾ, ನ. 12: ಇದುವರೆಗೆ ಅನೇಕ ಜನರು ತಮ್ಮ ಫೋಟೋ, ವಿಡಿಯೋಗಳನ್ನು ಗೂಗಲ್ಗೆ ಲಿಂಕ್ ಮಾಡಿ ಬೇಕಾ ಬಿಟ್ಟಿಯಾಗಿ ಇಟ್ಟುಕೊಳ್ಳುತ್ತಿದ್ದರು. ಆದರೆ ಇನ್ಮುಂದೆ ಈ ರೀತಿ ಮಾಡುವಂತಿಲ್ಲ. ಇಂತಹವರಿಗೆ ಬಿಗ್ ಶಾಕ್ ಆಗುವಂತಹ ಸುದ್ದಿಯೊಂದನ್ನು ಗೂಗಲ್ ನೀಡಿದೆ. ಅದೇನೆಂದರೆ ಇನ್ಮುಂದೆ ಹೆಚ್ಚುವರಿ ಸ್ಟೋರೇಜ್ ಮಾಡಿಕೊಳ್ಳುವ ಆಸೆ ಇದ್ದರೆ ಅದಕ್ಕೆ ನೀವು ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ.
ಗೂಗಲ್ 2015ರಿಂದ ಗೂಗಲ್ ಫೋಟೋದಲ್ಲಿ ಅನಿಯಮಿತ ಫೋಟೋ, ವಿಡಿಯೋ ಅಪ್ಲೋಡ್ ಮಾಡಲು ಅವಕಾಶ ನೀಡಿತ್ತು. ಇದೀಗ ಶುಲ್ಕ ವಿಧಿಸಲು ಮುಂದಾಗಿದೆ. ಆದರೆ 2021ರ ಜೂನ್ 1ರಿಂದ ಇದಕ್ಕೆ ಕಡಿವಾಣ ಬೀಳಲಿದೆ. ಅನ್ಲಿಮಿಟೆಡ್ ಸ್ಟೋರೇಜ್ ಸೌಲಭ್ಯವನ್ನು ನಿಲ್ಲಿಸುವುದಾಗಿ ಗೂಗಲ್ ಬುಧವಾರ ತನ್ನ ಬ್ಲಾಗ್ ಪೋಸ್ಟ್ನಲ್ಲಿ ತಿಳಿಸಿದೆ. ನೀವು ಗರಿಷ್ಠ 15 ಜಿ.ಬಿಯಷ್ಟು ಫೋಟೋ ಮತ್ತು ವಿಡಿಯೋಗಳನ್ನು ಅಪ್ಲೋಡ್ ಮಾಡಿ ಇಟ್ಟುಕೊಳ್ಳಲು ಅವಕಾಶವಿದೆ. ಆದರೆ ಅದನ್ನು ಮೀರಿ ನಿಮಗೆ ಜಾಗ ಬೇಕಿದ್ದರೆ ನೀವು ಶುಲ್ಕವನ್ನು ನೀಡುವುದು ಅನಿವಾರ್ಯ.
16 ಮೆಗಾ ಪಿಕ್ಸೆಲ್ ಫೋಟೋ ಮತ್ತು 1,080 ಎಚ್ಡಿ ಗುಣಮಟ್ಟದವರೆಗಿನ ವಿಡಿಯೋಗಳನ್ನು ಗೂಗಲ್ ಫೋಟೋದಲ್ಲಿ ಉಚಿತವಾಗಿ ಅಪ್ಲೋಡ್ ಮಾಡಬಹುದಾಗಿದೆ. ಇದಕ್ಕಿಂತ ಗುಣಮಟ್ಟದ ಫೋಟೋ, ವಿಡಿಯೋಗಳನ್ನು ಅಪ್ಲೋಡ್ ಮಾಡಬಹುದಾದರೂ ಅದಕ್ಕೆ ಗರಿಷ್ಠ 15 ಜಿಬಿ ಮಿತಿಯಿತ್ತು. ಇದೀಗ 15 ಜಿಬಿಗಿಂತ ಜಾಸ್ತಿ ಸ್ಟೋರೇಜ್ ಬಳಕೆಯಾದರೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂದು ಗೂಗಲ್ ಹೇಳಿದೆ. ಗೂಗಲ್ ಡ್ರೈವ್, ಗೂಗಲ್ ಫೋಟೋ, ಜಿ-ಮೇಲ್ ಸ್ಟೋರೇಜ್ ಇದು 2021ರ ಜೂನ್ 1ರಿಂದ ಅನ್ವಯ ಆಗಲಿದೆ.
ಗೂಗಲ್ ಡ್ರೈವ್ನಲ್ಲಿ 1 ತಿಂಗಳಿಗೆ 100 ಜಿ.ಬಿಗೆ 1.99 ಡಾಲರ್(ಸುಮಾರು 148 ರೂ.) ಇದ್ದರೆ 1 ಟೆರಾ ಬೈಟ್ಗೆ 9.999 ಡಾಲರ್ (ಸುಮಾರು 743 ರೂ). ಗೂಗಲ್ ತನ್ನ ಬಳಕೆದಾರರಿಗೆ 15 ಜಿಬಿ ಅನ್ಲಿಮಿಟೆಡ್ ಸ್ಟೋರೇಜ್ ನೀಡಿದರೆ ಆಯಪಲ್ ಕಂಪೆನಿ ತನ್ನ ಗ್ರಾಹಕರಿಗೆ 5 ಜಿಬಿ ಮಾತ್ರ ಉಚಿತ ಸ್ಟೋರೇಜ್ ನೀಡುತ್ತದೆ. ಬಳಿಕ 50 ಜಿಬಿಗೆ ಪ್ರತಿ ತಿಂಗಳಿಗೆ 0.99 ಡಾಲರ್ (ಸುಮಾರು 73 ರೂ) ಹಣವನ್ನು ಪಾವತಿಸಬೇಕಾಗುತ್ತದೆ ಎಂದು ಗೂಗಲ್ ತಿಳಿಸಿದೆ.