ಬೆಂಗಳೂರು, ಫೆ. 04: ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಥಿಯೇಟರ್ ಹೌಸ್ ಪುಲ್ಗೆ ಅನುಮತಿ ನೀಡಿದ್ದರೂ, ಶೇ.50ರಷ್ಟು ಭರ್ತಿಗೆ ಮಾರ್ಗಸೂಚಿ ಪ್ರಕಟಿಸಿತ್ತು. ಇಂತಹ ಕ್ರಮದ ವಿರುದ್ಧ ಸ್ಯಾಂಡಲ್ ವುಡ್ ಗಣ್ಯರು ನಿನ್ನೆ ಸಿಡಿದೆದ್ದಿದ್ದರು. ಇದರಿಂದಾಗಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸಿನಿ ಗಣ್ಯರ ಜೊತೆಗೆ ಚರ್ಚಿಸಿ ಸಭೆಯ ಬಳಿ, ನಾಲ್ಕು ವಾರಗಳ ಕಾಲ ರಾಜ್ಯದಲ್ಲಿ ಸಿನಿಮಾ ಮಂದಿರಗಳ ಹೌಸ್ ಪುಲ್ ಪ್ರದರ್ಶನಕ್ಕೆ ಅವಕಾಶ ನೀಡುವುದಾಗಿ ಪ್ರಕಟಿಸಿದ್ದರು. ಇದೀಗ ಹೌಸ್ ಪುಲ್ ಪ್ರದರ್ಶನಕ್ಕೆ ಅನುಮತಿಸಿ ರಾಜ್ಯ ಸರ್ಕಾರ ಅಧಿಕೃತವಾಗಿ ಸುತ್ತೋಲೆಯಲ್ಲಿ ಪ್ರಕಟಿಸಿದೆ.
ಈ ಕುರಿತಂತೆ ರಾಜ್ಯ ಸರ್ಕಾರದ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ರಾಜ್ಯದಲ್ಲಿ ಕೊರೋನಾ ಸೋಂಕಿನ ಭೀತಿಯ ನಡುವೆಯೂ ನಾಲ್ಕು ವಾರಗಳ ಕಾಲ ಸಿನಿಮಾ ಮಂದಿರಗಳ ಶೇ.100ರಷ್ಟು ಭರ್ತಿಗೆ ಅನುಮತಿಸಲಾಗಿದೆ. ಈ ಸಂದರ್ಭದಲ್ಲಿ ಚಿತ್ರಮಂದಿರಗಳ ಹೊರಗೆ ಕೊರೋನಾ ಮಾರ್ಗಸೂಚಿ ಮುಂಜಾಗ್ರತಾ ಕ್ರಮವಾಗಿ 6 ಅಡಿ ಅಂತರವನ್ನು ಕಾಪಾಡಿಕೊಳ್ಳಬೇಕು. ಚಿತ್ರಮಂದಿರ ಸುತ್ತಾ ಉಗುಳುವಂತಿಲ್ಲ. ಪ್ರೇಕ್ಷಕರನ್ನು ಥರ್ಮಲ್ ಸ್ಕ್ರೀನಿಂಗ್ ಮಾಡಬೇಕು. ಕಂಟೈನ್ಮೆಂಟ್ ಝೋನ್ ನಲ್ಲಿ ಪ್ರದರ್ಶನವಿಲ್ಲ ಎಂಬುದಾಗಿ ತಿಳಿಸಿದೆ.
ಇನ್ನೂ ಆನ್ ಲೈನ್ ನಲ್ಲಿ ಟಿಕೇಟ್ ಖರೀದಿಸಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಬೇಕು. ಪ್ರೇಕ್ಷಕರು ಕ್ಯೂ ನಿಲ್ಲಲು ಪ್ರತ್ಯೇಕ ವ್ಯವಸ್ಥೆ ಮಾಡಬೇಕು. ಆಹಾರ ಖರೀದಿ ವೇಳೆ ಆನ್ ಲೈನ್ ನಲ್ಲಿ ಹಣ ಪಾವತಿಗೆ ಅವಕಾಶ ನೀಡಬೇಕು. ಸಿನಿಮಾ ಪ್ರದರ್ಶನದ ನಂತ್ರ ಚಿತ್ರಮಂದಿರವನ್ನು ಸ್ಯಾನಿಟೈಸ್ ಮಾಡಬೇಕು. ಎಂಟ್ರಿ ಹಾಗೂ ಎಕ್ಸಿಟ್ ನಲ್ಲಿ ಸ್ಯಾನಿಟೈರ್ಸ್ ಇಡಬೇಕು ಎನ್ನುವಂತ ಕೊರೋನಾ ನಿಯಂತ್ರಣ ಕ್ರಮದಂತ ಷರತ್ತುಗಳಿಗೆ ಒಳಪಡಿಸಿ ನಾಲ್ಕು ವಾರಗಳ ಕಾಲ ರಾಜ್ಯ ಸರ್ಕಾರ ಚಿತ್ರಮಂದಿರಗಳ ಹೌಸ್ ಪುಲ್ ಪ್ರದರ್ಶನಕ್ಕೆ ಅವಕಾಶ ನೀಡಿದೆ.