ಹೊಸದಿಲ್ಲಿ: ರಾಜಧಾನಿ ದೆಹಲಿಯಲ್ಲಿ ರಾತ್ರೋರಾತ್ರಿ ಗುಂಡಿನ ಮೊರೆತ ಕೇಳಿ ಬಂದಿದ್ದು, ಘಟನೆಯಲ್ಲಿ ಶಂಕಿತ ಐಸಿಸ್ ಉಗ್ರನನ್ನು ಪೊಲೀಸರು ಬಂಧಿಸಿದ್ದಾರೆ.
ಶುಕ್ರವಾರ ತಡರಾತ್ರಿ ಶಂಕಿತ ಉಗ್ರನನ್ನ ಬಂಧಿಸಲಾಗಿದ್ದು, ಆತನಿಂದ ಭಾರೀ ಪ್ರಮಾಣದ ಸ್ಪೋಟಕ ವಸ್ತುಗಳನ್ನ ವಶಕ್ಕೆ ಪಡೆಯಲಾಗಿದೆ. ಶಂಕಿತ ಉಗ್ರನನ್ನ ಅಬು ಯೂಸಫ್ ಎಂದು ಗುರುತಿಸಲಾಗಿದೆ.
ದೆಹಲಿಯ ದೌಲಾ ಕುವಾನ್ ಎಂಬಲ್ಲಿ ಸಂಶಯಾಸ್ಪದ ಚಟುವಟಿಕೆಗಳು ಗುರುತಿಸಿದ್ದ ಸ್ಪೆಷಲ್ ಸೆಲ್‌ನ ಪೊಲೀಸರು ರಾತ್ರಿ ದಾಳಿ ನಡೆಸಿದ್ದಾರೆ. ಈ ವೇಳೆ ಉಗ್ರನಿಂದಲೂ ಪ್ರತಿ ದಾಳಿ ನಡೆದಿದೆ ಎನ್ನಲಾಗಿದೆ. ಇನ್ನು ಈ ಕಾರ್ಯಾಚರಣೆಯಲ್ಲಿ ಒಟ್ಟು ನಾಲ್ವರು ಪೊಲೀಸರು ಭಾಗಿಯಾಗಿ ಉಗ್ರನನ್ನ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತನಿಂದ ಎರಡು ಸ್ಪೋಟಕ ವಸ್ತು ಹಾಗೂ ಒಂದು ಪಿಸ್ತೂಲ್ ವಶಕ್ಕೆ ಪಡೆದಿರುವ ಪೊಲೀಸರು ಸದ್ಯ ವಿಚಾರಣೆ ಮುಂದುವರಿಸಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಶಂಕಿತ ಉಗ್ರ ರೆಹಮಾನ್ ಎಂಬಾತನನ್ನ ಬಂಧಿಸಿದ್ದರು. ಈತ ಎಮ್.ಎಸ್ ರಾಮಯ್ಯ ಕಾಲೇಜಿನಲ್ಲಿ ವೈದ್ಯಕೀಯ ಕೋರ್ಸ್ ಕಲಿಯುತ್ತಿದ್ದ.