ಹೊಸದಿಲ್ಲಿ: ಜೈಪುರದಿಂದ ದುಬೈಗೆ ಕೊರೊನಾ ಸೋಂಕಿತರನ್ನು ವಿಮಾನದಲ್ಲಿ ಕರೆತಂದಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ಸಂಚಾರಕ್ಕೆ ದುಬೈ ನಾಗರಿಕ ವಿಮಾನಯಾನ ಪ್ರಾಧಿಕಾರ ನಿಷೇಧ ಹೇರಿದೆ.
ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಕಡ್ಡಾಯವಾಗಿ ಕೊರೊನಾ ತಪಾಸಣೆ ನಡೆಸಬೇಕೆಂದು ಆದೇಶವಿದೆ. ಆದರೂ ಏರ್ ಇಂಡಿಯಾದಲ್ಲಿ ದುಬೈಗೆ ಕೊರೊನಾ ಪಾಸಿಟಿವ್ ಇದ್ದ ಪ್ರಯಾಣಿಕರೊಬ್ಬರನ್ನು ಕರೆತಂದಿರುವ ಆರೋಪ ಕೇಳಿ ಬಂದಿದೆ.
ಈ ಹಿನ್ನೆಲೆಯಲ್ಲಿ ಇಂದಿನಿಂದ ಅಕ್ಟೋಬರ್ 2ರವರೆಗೆ ಭಾರತದಿಂದ ದುಬೈಗೆ ಏರ್ ಇಂಡಿಯಾ ವಿಮಾನಗಳು ಸಂಚಾರಕ್ಕೆ ಅವಕಾಶ ನೀಡದಿರಲು ದುಬೈ ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಸೆಪ್ಟೆಂಬರ್ 4ರಂದು ಜೈಪುರದಿಂದ ದುಬೈಗೆ ಹೊರಟಿದ್ದ ವಿಶೇಷ ವಿಮಾನದಲ್ಲಿ ಕೊರೊನಾ ಪಾಸಿಟಿವ್ ಇದ್ದ ಪ್ರಯಾಣಿಕರನ್ನು ಕರೆತರಲಾಗಿದೆ. ಆತನಿಗೆ ಸೆಪ್ಟೆಂಬರ್ 2ರಂದೇ ಕೊರೊನಾ ಸೋಂಕು ಇರುವುದಾಗಿ ವೈದ್ಯಕೀಯ ವರದಿ ನೀಡಲಾಗಿತ್ತು.
ಹೀಗಿದ್ದರೂ ಆಸ್ಪತ್ರೆಯಲ್ಲಿ ಕ್ವಾರಂಟೈನ್ನಲ್ಲಿರಬೇಕಾದ ರೋಗಿಯನ್ನು ವಿಮಾನದಲ್ಲಿ ಕರೆತರಲಾಗಿದೆ ಎಂದು ಆರೋಪಿಸಿ ದುಬೈ ನಾಗರಿಕ ವಿಮಾನಯಾನ ಏರ್ ಇಂಡಿಯಾ ವಿಮಾನ ಸಂಚಾರಕ್ಕೆ ನಿಷೇಧ ಹೇರಿದೆ. ಸೆ. 18ರಿಂದ ಅಕ್ಟೋಬರ್ 2ರವರೆಗೆ ಭಾರತದಿಂದ ದುಬೈಗೆ ಏರ್ ಇಂಡಿಯಾ ವಿಮಾನಗಳ ಸಂಚಾರವನ್ನು ನಿಷೇಧಿಸಲಾಗಿದೆ ಎನ್ನಲಾಗಿದೆ.