ಅಯೋಧ್ಯಾ, ಏ. 16: ರಾಮ ಮಂದಿರ ನಿರ್ಮಾಣ ಅಭಿಯಾನಕ್ಕೆ ಹರಿದುಬಂದ ದೇಣಿಗೆಯಲ್ಲಿ 22 ಕೋಟಿ ಮುಖಬೆಲೆಯ 15 ಸಾವಿರ ಬ್ಯಾಂಕ್ ಚೆಕ್ಗಳು ಬೌನ್ಸ್ ಆಗಿವೆ ಎಂದು ಪಿಟಿಐ ವರದಿ ಮಾಡಿದೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಆಡಿಟ್ ವರದಿಯಲ್ಲಿ ಈ ವಿಷಯ ಬಹಿರಂಗಗೊಂಡಿದೆ. ದೇಣಿಗೆಗೆಂದು ನೀಡಿದ ಚೆಕ್ನ ಬ್ಯಾಂಕ್ ಖಾತೆಯಲ್ಲಿ ಹಣ ಇಲ್ಲದೇ ಮತ್ತು ಕೆಲವು ತಾಂತ್ರಿಕ ಕಾರಣಗಳಿಂದ ಚೆಕ್ ಬೌನ್ಸ್ ಆಗಿದೆ ಎಂದು ವರದಿ ತಿಳಿಸಿದೆ.
ತಾಂತ್ರಿಕ ಕಾರಣಗಳಿಂದ ಬೌನ್ಸ್ ಆದ ಚೆಕ್ಗಳನ್ನು ಪುನಃ ಸರಿಪಡಿಸಲು ಬ್ಯಾಂಕ್ಗಳು ಪ್ರಯತ್ನಿಸುತ್ತಿವೆ. ಬೌನ್ಸ್ ಆದವುಗಳಲ್ಲಿ ಸುಮಾರು 200ದಷ್ಟು ಚೆಕ್ಗಳು ಅಯೋಧ್ಯೆ ಮತ್ತು ಸುತ್ತಮುತ್ತಲಿನ ಭಾಗದಿಂದಲೇ ಬಂದಿವೆ. ಬೌನ್ಸ್ ಆದ ಚೆಕ್ಗಳನ್ನು ಸಲ್ಲಿಸಿದವರ ಬಳಿ ಮತ್ತೊಮ್ಮೆ ದೇಣಿಗೆ ನೀಡಲು ಮನವಿ ಮಾಡುತ್ತಿದ್ದೇವೆ ಎಂದು ಶ್ರೀ ರಾಮ ಜನ್ಮಭೂಮಿ ಮಂದಿರ ನಿರ್ಮಾಣ ಟ್ರಸ್ಟ್ನ ಸದಸ್ಯರಾದ ಡಾ.ಅನಿಲ್ ಮಿಶ್ರಾ ಅವರು ತಿಳಿಸಿದ್ದಾರೆ.
ನೂತನ ಶ್ರೀ ರಾಮ ಮಂದಿರವನ್ನು ನಿರ್ಮಿಸಲು ಸಾರ್ವಜನಿಕರಿಂದ ಹಣ ಸಂಗ್ರಹಿಸಲು ಅಭಿಯಾನ ರೂಪಿಸಲಾಗಿತ್ತು. ವಿಶ್ವ ಹಿಂದೂ ಪರಿಷತ್ ದೇಶದಾದ್ಯಂತ ಜನವರಿ 15ರಿಂದ ಫೆಬ್ರವರಿ 17ರವರೆಗೆ ಈ ಅಭಿಯಾನ ನಡೆಸಿತ್ತು. ಸುಮಾರು 5 ಸಾವಿರ ಕೋಟಿ ಹಣ ದೇಣಿಗೆ ರೂಪದಲ್ಲಿ ಸಲ್ಲಿಕೆಯಾಗಿದೆ ಎಂದು ಅಂದಾಜಿಸಲಾಗಿದೆ. ಆದರೆ ಈವರೆಗೂ ಸಂಗ್ರಹಿಸಲಾದ ದೇಣಿಗೆಯ ಮೊತ್ತವನ್ನು ಖಚಿತವಾಗಿ ಘೋಷಿಸಲಾಗಿಲ್ಲ.