ಲಕ್ಕೋ, ಫೆ 5: ಉತ್ತರ ಪ್ರದೇಶದಲ್ಲಿ ಚುನಾವಣೆ ಬಿಸಿ ತಟ್ಟಿದ್ದು, ಫೆ. 10 ರಂದು ನಡೆಯುವ ಮೊದಲ ಹಂತದ ಚುನಾವಣೆಗೆ ಎಲ್ಲಾ ಪಕ್ಷಗಳು ಪೂರ್ವ ಸಿದ್ದತೆ ನಡೆಸಿದ್ದಾರೆ. ಫೆ.10ರಂದು 11 ಜಿಲ್ಲೆಗಳ ವ್ಯಾಪ್ತಿಯ 58 ಕ್ಷೇತ್ರಗಳಿಗೆ ನಡೆಯುವ ಮೊದಲ ಹಂತದ ಚುನಾವಣೆಯಲ್ಲಿ 156 ಮಂದಿ ಅಪರಾಧ ಹಿನ್ನೆಲೆಯವರಿದ್ದಾರೆ. ಅದರಲ್ಲೂ 121 ಮಂದಿ ಗಂಭೀರ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಒಟ್ಟು 58 ಕ್ಷೇತ್ರಗಳ ಪೈಕಿ 31 ಕ್ಷೇತ್ರಗಳು ರೆಡ್ ಅಲರ್ಟ್ ಎದುರಿಸುತ್ತವೆ. ಇಲ್ಲೆಲ್ಲ ಮೂರರಿಂದ ನಾಲ್ಕು ಅಭ್ಯರ್ಥಿಗಳು ಕ್ರಿಮಿನಲ್ ಪ್ರಕರಣ ಎದುರಿಸುತ್ತಿದ್ದಾರೆ. ಮೀರಜ್ ಜಿಲ್ಲೆಯ ಶಿವಲಾಸ್ ಕ್ಷೇತ್ರ ಮತ್ತು ಆಗ್ರಾ ಜಿಲ್ಲೆಯ ಖೇರಾಗಾತ್ ಕ್ಷೇತ್ರದಲ್ಲಿ ತಲಾ ಆರು ಮಂದಿ ಕ್ರಿಮಿನಲ್ ಗಳು ಕಣದಲ್ಲಿದ್ದಾರೆ.

ಹಾಪುರ್ ಜಿಲ್ಲೆಯ ಧೋಲಾನಾ, ಗಾಜಿಯಾಬಾದ್ ಜಿಲ್ಲೆಯ ಲೋನಿ, ಶಾಮಿಯ ಥಾನಾ ಭವನ್ ಮತ್ತು ಮೀರತ ಕ್ಷೇತ್ರದಲ್ಲಿ ತಲಾ ಐದು ಮಂದಿ ಕ್ರಿಮಿನಲ್ ಅಭ್ಯರ್ಥಿಗಳಿದ್ದಾರೆ. ಈ ಪೈಕಿ ಸಮಾಜವಾದಿ ಪಾರ್ಟಿಯ ಶೇ. 75 ಅಭ್ಯರ್ಥಿಗಳು ಕ್ರಿಮಿನಲ್ ಹಿನ್ನೆಲೆಯವರು. ಆನಂತರ ಆರ್ .ಎಲ್. ಡಿ ಪಕ್ಷದವರು ಹೆಚ್ಚಿದ್ದಾರೆ. ಸಮಾಜವಾದಿಯ 28 ಅಭ್ಯರ್ಥಿಗಳಲ್ಲಿ 21, ಆರ್ ಎಲ್ ಡಿ ಪಕ್ಷದ 29 ಮಂದಿಯಲ್ಲಿ 17 ಮತ್ತು ಬಿಜೆಪಿಯ 59 ಅಭ್ಯರ್ಥಿಗಳಲ್ಲಿ 29 ಮಂದಿ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾರೆ. ಕಾಂಗ್ರೆಸಿನ 58 ಮಂದಿಯಲ್ಲಿ 21 ಮಂದಿ ಕ್ರಿಮಿನಲ್ ಹಿನ್ನೆಲೆಯವರಿದ್ದಾರೆ.

ಮೊದಲ ಹಂತದಲ್ಲಿ 58 ಕ್ಷೇತ್ರಗಳಲ್ಲಿ 615 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದು, ಆ ಪೈಕಿ 156 ಮಂದಿ ತಮ್ಮ ಅಫಿಡವಿಟ್ ನಲ್ಲಿ ಕ್ರಿಮಿನಲ್ ಕೇಸು ಇರುವ ಬಗ್ಗೆ ಹೇಳಿಕೊಂಡಿದ್ದಾರೆ. 121 ಮಂದಿ ಗಂಭೀರ ಕ್ರಿಮಿನಲ್ ಕೇಸು ಎದುರಿಸುತ್ತಿರುವುದಾಗಿ ಹೇಳಿದ್ದಾರೆ. ಈ ಪೈಕಿ 12 ಮಂದಿ ಮಹಿಳೆಯರ ಮೇಲಿನ ಕಿರುಕುಳ ಪ್ರಕರಣ ಎದುರಿಸುತ್ತಿದ್ದರೆ, ಒಬ್ಬ ಆರ್ ಎಲ್ ಡಿಯಿಂದ ಸ್ಪರ್ಧಿಸುವ ಮೊಹಮ್ಮದ್ ಯೂನುಸ್ ಅತ್ಯಾಚಾರ ಪ್ರಕರಣದ ಆರೋಪಿ. ಆರು ಮಂದಿ ಅಭ್ಯರ್ಥಿಗಳ ವಿರುದ್ಧ ಕೊಲೆ ಪ್ರಕರಣ, 30 ಮಂದಿ ವಿರುದ್ಧ ಕೊಲೆಯತ್ನ ಪ್ರಕರಣಗಳಿವೆ.