ಹೈದರಾಬಾದ್, ಅಕ್ಟೋಬರ್ 14: 1903ರಲ್ಲಿ ಸುರಿದ ಮಹಾಮಳೆಯ ನಂತರ ಹೈದರಾಬಾದ್ನಲ್ಲಿ ಈ ವರ್ಷ ಅತಿ ಹೆಚ್ಚು ಅಂದರೆ ಕಳೆದ ೨೪ ಗಂಟೆಗಳಲ್ಲಿ 191.8 ಮಿ.ಮೀನಷ್ಟು ಮಳೆ ಇದಾಗಿದೆ. ಮುಂದಿನ ಐದು ತಾಸಿನೊಳಗಾಗಿ ಮಧ್ಯಪ್ರದೇಶ, ಮರಾಠವಾಡ, ಕೊಂಕಣ, ಗೋವಾ, ಕರ್ನಾಟಕದ ಉತ್ತರ ಒಳನಾಡಿನಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮಂಗಳವಾರ ಸುರಿದ ಭಾರಿ ಮಳೆಗೆ ತೆಲಂಗಾಣದ ರಸ್ತೆಗಳು ಜಲಾವೃತವಾಗಿ ವಾಹನ ಸಂಚಾರ ಅಸ್ತವ್ಯಸ್ತವಾಗಿದ್ದು, ಇನ್ನು ಕೆಲವು ಬಡಾವಣೆಗಳಿಗೆ ನೀರು ನುಗ್ಗಿ, ವಾಹನಗಳನ್ನು ತೇಲಿಸಿಕೊಂಡು ಹೋಗಿವೆ. ಇನ್ನು 2 ತಿಂಗಳ ಮಗು ಸೇರಿ 9 ಜನ ಸಾವನ್ನಪ್ಪಿದ್ದಾರೆ.
ಉತ್ತರ ಆಂಧ್ರಪ್ರದೇಶದ ಕರಾವಳಿಯಲ್ಲಿ ಗಾಳಿಯ ತೀವ್ರತೆ ಹೆಚ್ಚಾಗಿರುವ ಕಾರಣ ಅ.14 ಮತ್ತು 15 ರಂದು ಕರ್ನಾಟಕದ ಉತ್ತರ ಒಳನಾಡಿನಲ್ಲಿ ಗುಡುಗು ಸಹಿತ ಭಾರಿ ಮಳೆ ಬರುವ ಸಾಧ್ಯತೆಯಿದ್ದು, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಹಾವೇರಿ, ಕಲಬುರಗಿ, ರಾಯಚೂರು, ಯಾದಗಿರಿ, ವಿಜಯಪುರ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಕರಾವಳಿಯ ದ.ಕ, ಉಡುಪಿಯಲ್ಲಿ ಭಾರೀ ಮಳೆಯಾಗುತ್ತಿರುವುದರ ಜತೆಗೆ ಹವಾಮಾನ ಇಲಾಖೆ ಎರಡು ದಿನಗಳ ಕಾಲ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಆದ್ದರಿಂದ ಕರಾವಳಿಯಲ್ಲಿ ಅಕ್ಟೋಬರ್ 14 ಮತ್ತು 15ರಂದು ಆರೆಂಜ್ ಅಲರ್ಟ್ ಇರಲಿದೆ. ಮಹಾರಾಷ್ಟ್ರ ಹಾಗೂ ಗುಜರಾತ್ನಲ್ಲಿ ಅಕ್ಟೋಬರ್ 16 ರಂದು ಮಳೆಯಾಗಲಿದೆ.
ಅಕ್ಟೋಬರ್ ಕೊನೆಯ ತನಕವೂ ಮಳೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.