Chennai : ತಮಿಳುನಾಡು ಪೊಲೀಸರು(Tamilnadu Police) 50 ವರ್ಷಗಳ ಹಿಂದೆ ತಮಿಳುನಾಡಿನ ತಿರಿವಾರೂರ್ ಜಿಲ್ಲೆಯ ದೇವಸ್ಥಾನದಿಂದ ಕದ್ದ ಎರಡು ಪುರಾತನ ವಿಗ್ರಹಗಳನ್ನು(Antique Idols) ಪತ್ತೆ ಹಚ್ಚಿದ್ದು, ಆ ಎರಡು ವಿಗ್ರಹಗಳ ಮಾಲೀಕತ್ವವನ್ನು ಪಡೆಯಲು ಅಮೇರಿಕಾ ಮೂಲದ ವಸ್ತು ಸಂಗ್ರಹಾಲಯ ಮತ್ತು ಹರಾಜು ಕಂಪನಿಗೆ ವಿಗ್ರಹಗಳನ್ನು ಮರಳಿಸುವಂತೆ ಕೋರಿ ಪತ್ರ ಬರೆದಿದೆ.
ಅಮೇರಿಕಾದ(America) ಲಾಸ್ ಏಂಜಲೀಸ್ನ LACMA ಮ್ಯೂಸಿಯಂನಲ್ಲಿ ಪ್ರದರ್ಶಿಸಲಾದ ಎರಡು ವಿಗ್ರಹಗಳನ್ನು ತಿರುವರೂರು ಜಿಲ್ಲೆಯ ಮನ್ನಾರ್ಗುಡಿ ತಾಲೂಕಿನ ಅರುಲ್ಮಿಗು ವಿಶ್ವನಾಥ ಸ್ವಾಮಿ ದೇವಸ್ಥಾನದಿಂದ ಕಳವು ಮಾಡಲಾಗಿದೆ ಎಂದು ತಮಿಳುನಾಡಿನ ವಿಗ್ರಹ ವಿಭಾಗದ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

ದೇವಾಲಯದಲ್ಲಿ ಮೂರು ಪುರಾತನ ಲೋಹದ ವಿಗ್ರಹಗಳನ್ನು ಕದ್ದು ಅದರ ಬದಲಿಗೆ ನಕಲಿ ವಿಗ್ರಹಗಳನ್ನು ಇಡಲಾಗಿದೆ ಎಂದು ತಿಳಿದುಬಂದಿದೆ. ದೇವಾಲಯದ ‘ಸೋಮಸ್ಕಂದರ’ ವಿಗ್ರಹ ಮತ್ತು ‘ನೃತ್ಯ ಸಂಬಂಧರ’ ವಿಗ್ರಹಗಳನ್ನು ಇದೇ ರೀತಿಯಲ್ಲಿ ಕಳ್ಳತನ ಮಾಡಿರುವ ಸಾಧ್ಯತೆಯಿದೆ ಎಂದು ವಿಗ್ರಹ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ಫ್ರೆಂಚ್ ಇನ್ಸ್ಟಿಟ್ಯೂಟ್ ಆಫ್ ಪಾಂಡಿಚೇರಿ(FIC) ಸಂಸ್ಥೆ ನೀಡಿರುವ ವಿಗ್ರಹಗಳ ಚಿತ್ರಗಳ ಮೂಲಕ ತನಿಖಾ ತಂಡವು ಹರಾಜು ಸಂಸ್ಥೆಗಳು ಸೇರಿದಂತೆ ವಿಶ್ವಾದ್ಯಂತ ವಸ್ತುಸಂಗ್ರಹಾಲಯಗಳು ಮತ್ತು ಕಲಾ ಗ್ಯಾಲರಿಗಳಲ್ಲಿ ವಿಗ್ರಹಗಳನ್ನು ಹುಡುಕಿತು. ವಾಷಿಂಗ್ಟನ್ ಡಿಸಿನಲ್ಲಿರುವ ಫ್ರೀರ್ ಸ್ಯಾಕ್ಲರ್ ಮ್ಯೂಸಿಯಂನ ವೆಬ್ಸೈಟ್ಗಳಲ್ಲಿ ಇದೇ ರೀತಿಯ ವಿಗ್ರಹಗಳ ಫೋಟೋಗಳು ಕಂಡುಬಂದಿವೆ ಎನ್ನಲಾಗಿದೆ.
ಇದನ್ನೂ ಓದಿ : https://vijayatimes.com/tickets-sold-out-for-gg/
ಇನ್ನು ತಮಿಳುನಾಡು ಸರ್ಕಾರವು ವಿಗ್ರಹಗಳ ಮಾಲೀಕತ್ವವನ್ನು ಪ್ರತಿಪಾದಿಸಲು ಮತ್ತು ವಾಪಸಾತಿಗಾಗಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾಕ್ಕೆ ದಾಖಲೆಗಳನ್ನು ಸಿದ್ಧಪಡಿಸಿ ಸಲ್ಲಿಸಿದೆ. ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೋ) ಒಪ್ಪಂದದಡಿಯಲ್ಲಿ ವಿಗ್ರಹಗಳನ್ನು ಹಿಂಪಡೆಯಲು ಮತ್ತು ತಿರುವರೂರು ಜಿಲ್ಲೆಯ ಮನ್ನಾರ್ಗುಡಿಯಲ್ಲಿರುವ ಅರುಲ್ಮಿಗು ವಿಶ್ವನಾಥ ಸ್ವಾಮಿ ದೇವಸ್ಥಾನ,
ಆಲತ್ತೂರ್ಗೆ ಅವುಗಳನ್ನು ಮರುಸ್ಥಾಪಿಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಭಾರತೀಯ ವಿದೇಶಾಂಗ ಇಲಾಖೆ ಕೂಡಾ ಅಮೇರಿಕಾದ ಸರ್ಕಾರದೊಂದಿಗೆ ಮಾತುಕತೆಗೆ ಮುಂದಾಗಿದೆ.
- ಮಹೇಶ್.ಪಿ.ಎಚ್