ಹೈದರಾಬಾದ್, ನ. 4: ಪತ್ನಿಗೆ ದೊರೆಯುತ್ತಿದ್ದ 2,250ರೂ. ಪಿಂಚಣಿ ಹಣದ ವಿಚಾರದಲ್ಲಿ 92ರ ವೃದ್ಧ ಪತಿ ವಾಕಿಂಗ್ ಸ್ಟಿಕ್ನಿಂದ ಹೊಡೆದು ಪತ್ನಿಯನ್ನು ಹತ್ಯೆಗೈದ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಅಮೃತಲೂರು ಬ್ಲಾಕ್ನ ಯಲವರ್ರು ಗ್ರಾಮದಲ್ಲಿ ನಡೆದಿದೆ. ಆರೋಪಿ ವೃದ್ಧನನ್ನು ಎಂ. ಸ್ಯಾಮ್ಯುಯೆಲ್ ಎಂದು ಗುರುತಿಸಲಾಗಿದೆ. ಈತ ತನ್ನ ಪತ್ನಿ ಅಪ್ರಾಯಮ್ಮ(90)ನನ್ನು ಹತ್ಯೆ ಮಾಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವೃದ್ಧನನ್ನು ಬಂಧಿಸಿದ್ದಾರೆ.
ಆಂಧ್ರ ಸರ್ಕಾರದ ನಿಯಮದ ಪ್ರಕಾರವಾಗಿ, ಪ್ರತಿ ಕುಟುಂಬದ ಒಬ್ಬ ಹಿರಿಯ ಸದಸ್ಯನಿಗೆ 2,250 ರೂ. ಪಿಂಚಣಿ ದೊರೆಯುತ್ತದೆ. ಈ ಕಾರಣದಿಂದಾಗಿ ಸ್ಯಾಮ್ಯುಯೆಲ್ನ ಪತ್ನಿಗೆ ಪ್ರತಿ ತಿಂಗಳ ಮೊದಲ ವಾರದಲ್ಲಿ ಪಿಂಚಣಿ ಹಣ ದೊರೆಯುತ್ತಿತ್ತು. ಆದರೆ ಈ ಪಿಂಚಣಿ ಹಣದ ವಿಚಾರವಾಗಿ ದಂಪತಿಗಳ ನಡುವೆ ಪದೇ ಪದೇ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ. ಇದೇ ಕಾರಣಕ್ಕಾಗಿ ಈ ಇಬ್ಬರು ಹಲವು ವರ್ಷದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಅಂತೆಯೇ ನವೆಂಬರ್ 1ರಂದು ಸ್ಯಾಮ್ಯುಯೆಲ್ ಪಿಂಚಣಿಯಲ್ಲಿ ತನ್ನ ಪಾಲು ಕೇಳಲೆಂದು ಪತ್ನಿಯನ್ನು ಭೇಟಿಯಾಗಿದ್ದು, ಈ ವೇಳೆ ಕಡಿಮೆ ಹಣ ನೀಡಿದ ಕಾರಣಕ್ಕೆ ಕುಪಿತಗೊಂಡ ಪತಿ, ಅಪ್ರಾಯಮ್ಮ ಅವರೊಂದಿಗೆ ಜಗಳವಾಡಿ ಹೋಗಿದ್ದ. ಬಳಿಕ ಮರುದಿನ ಮುಂಜಾನೆಯೇ ಅಪ್ರಾಯಮ್ಮನ ಮನೆಗೆ ಬಂದು ವಾಕಿಂಗ್ ಸ್ಟಿಕ್ನಿಂದ ಪತ್ನಿಯ ಮೇಲೆ ಹಲ್ಲೆಗೈದು, ಕೊಲೆ ಮಾಡಿದ್ದಾರೆ. ಬಳಿಕ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಸ್ಥಳಕ್ಕೆ ಬಂದ ಪೊಲೀಸರು, ವೃದ್ಧ ಸ್ಯಾಮ್ಯುಯೆಲ್ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.