ಬೆಂಗಳೂರು, ಫೆ. 27: ಸಾಕಷ್ಟು ಸಂದರ್ಭಗಳಲ್ಲಿ ಗುಂಡಿಬಿದ್ದ ರಸ್ತೆಗಳು, ಡಾಂಬರೀಕರಣ ಕಾಣದ ರಸ್ತೆಗಳು ಎಲ್ಲರ ಗಮನ ಸೆಳೆಯುವ ಮೂಲಕ ಜನಸಾಮಾನ್ಯರ ಕೆಂಗಣ್ಣಿಗೆ ಗುರಿಯಾಗುವುದು ಸರ್ವೇಸಾಮಾನ್ಯ. ಆದರೆ ಇದಕ್ಕೆ ವಿಭಿನ್ನವೆಂಬಂತೆ ಕರ್ನಾಟಕದ ರಸ್ತೆಯೊಂದು ಡಾಂಬರೀಕರಣದ ಮೂಲಕ ದಾಖಲೆಯ ಪುಟ ಸೇರಿದೆ.
ಹೌದು, ಇದು ಅಚ್ಚರಿ ಎನಿಸಿದರು, ನಂಬಲೇಬೇಕಾದ ವಿಷಯ. ಕರ್ನಾಟಕದ ಸೊಲಾಪುರ-ವಿಜಯಪುರ ಮಾರ್ಗದ 25.54 ಕಿ.ಮೀ. ಹೆದ್ದಾರಿಯ ಡಾಂಬರೀಕರಣ ಕಾಮಗಾರಿಯನ್ನು ಕೇವಲ 18 ಗಂಟೆಗಳಲ್ಲಿ ಪೂರ್ಣಗೊಳಿಸಲಾಯಿತು. ಆ ಮೂಲಕ ಲಿಮ್ಕಾ ಬುಕ್ ನಲ್ಲಿ ದಾಖಲಾಗುವುದೆಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಟ್ವೀಟ್ ಮಾಡಿದ್ದಾರೆ.
ಈ ಬಗ್ಗೆ ಡಿಸಿಎಂ, ಗೋವಿಂದ ಕಾರಜೋಳ ಸೇರಿದಂತೆ ಹಲವು ಬಿಜೆಪಿ ನಾಯಕರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಸಂತಸ ಹಂಚಿಕೊಂಡಿದ್ದಾರೆ.