ಚೆನ್ನೈ, ಫೆ. 06: ನಾಯಕ ಜೋ ರೂಟ್(218) ಅಮೋಘ ದ್ವಿಶತಕದ ನೆರವಿನಿಂದ ಭಾರತ ವಿರುದ್ಧದ ಪ್ರಥಮ ಟೆಸ್ಟ್ನ ಎರಡನೇ ದಿನದಾಟದಲ್ಲೂ ಟೀಂ ಇಂಡಿಯಾ ಆಟಗಾರರ ಬೆವರಿಳಿಸಿದ ಇಂಗ್ಲೆಂಡ್, ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದೆ.
ಎಂ.ಎ.ಚಿದಂಬರಂ ಕ್ರೀಡಾಂಗದಲ್ಲಿ ನಡೆಯುತ್ತಿರುವ ಪಂದ್ಯದ 2ನೇ ದಿನದಾಟದಲ್ಲೂ ಇಂಗ್ಲೆಂಡ್ ಬ್ಯಾಟ್ಸಮನ್ಗಳು ಅಬ್ಬರಿಸಿದರು. ಪರಿಣಾಮ 2ನೇ ದಿನದಾಟದಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 555 ರನ್ಗಳಿಸಿರುವ ಇಂಗ್ಲೆಂಡ್, ಪಂದ್ಯದ ಮೇಲೆ ಹಿಡಿತ ಸಾಧಿಸಿದೆ.
ಮೊದಲ ದಿನದ ಮೊತ್ತ 3 ವಿಕೆಟ್ ನಷ್ಟಕ್ಕೆ 263 ರನ್ಗಳಿಂದ ದಿನದಾಟ ಆರಂಭಿಸಿದ ಇಂಗ್ಲೆಂಡ್ಗೆ ನಾಯಕ ಜೋ ರೂಟ್ ಆಸರೆಯಾದರು. ಭಾರತೀಯ ಬೌಲಿಂಗ್ ದಾಳಿಯನ್ನ ಸಮರ್ಥವಾಗಿ ಎದುರಿಸಿದ ರೂಟ್, ತಮ್ಮ ಟೆಸ್ಟ್ ಕ್ರಿಕೆಟ್ ವೃತ್ತಿ ಬದುಕಿನ 4ನೇ ದ್ವಿಶತಕ ಬಾರಿಸಿ ಮಿಂಚಿದರು. ಅಲ್ಲದೇ 100ನೇ ಟೆಸ್ಟ್ ಪಂದ್ಯವಾಡುತ್ತಿರುವ ಅವರು 100ನೇ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಬಾರಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆ ಪಡೆಯುವ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಹೊಸ ದಾಖಲೆ ಬರೆದರು.
ಇವರಿಗೆ ಉತ್ತಮ ಸಾಥ್ ನೀಡಿದ ಆಲ್ರೌಂಡರ್ ಬೆನ್ ಸ್ಟೋಕ್ಸ್(82) ಆಕರ್ಷಕ ಅರ್ಧಶತಕ ಬಾರಿಸಿದರೆ. ನಂತರ ಬಂದ ಓಲ್ಲೇ ಪೋಪ್(34), ಜಾಸ್ ಬಟ್ಲರ್(30) ಉಪಯುಕ್ತ ಕಾಣಿಕೆ ನೀಡಿದರು. ದಿನದಂತ್ಯಕ್ಕೆ ಡೊಮಿನಿಕ್ ಬೆಸ್(ಅಜೇಯ 28), ಜಾಕ್ ಲೀಚ್(ಅಜೇಯ 6) ರನ್ಗಳಿಸಿ ಕಣದಲ್ಲಿದ್ದಾರೆ. ಟೀಂ ಇಂಡಿಯಾ ಪರ ಇಶಾಂತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ರವಿಚಂದ್ರನ್ ಅಶ್ವಿನ್, ಶಹಬಾಸ್ ನದೀಮ್ ತಲಾ 2 ವಿಕೆಟ್ ಪಡೆಯಲಷ್ಟೇ ಶಕ್ತರಾದರು.