ಕ್ರೈಸ್ಟ್ ಚರ್ಚ್, ಜ. 04: ಅಜ಼ರ್ ಅಲಿ(93) ಹಾಗೂ ನಾಯಕ ಮೊಹಮ್ಮದ್ ರಿಜ್ವಾನ್(61) ಜವಾಬ್ದಾರಿಯುತ ಬ್ಯಾಟಿಂಗ್ ನಡುವೆಯೂ ಕೈಲ್ ಜೇಮಿಸನ್(69ಕ್ಕೆ 5) ಬೌಲಿಂಗ್ ದಾಳಿಗೆ ತತ್ತರಿಸಿದ ಪಾಕಿಸ್ತಾನ, ಅತಿಥೇಯ ನ್ಯೂಜಿ಼ಲೆಂಡ್ ವಿರುದ್ಧದ 2ನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 297 ರನ್‌ಗಳಿಗೆ ಸರ್ವಪತನ ಕಂಡಿದೆ.
ಇಲ್ಲಿನ ಹ್ಯಾಗ್ಲಿ ಓವಲ್ ಮೈದಾನದಲ್ಲಿ ಭಾನುವಾರ ಆರಂಭಗೊಂಡ 2ನೇ ಟೆಸ್ಟ್‌ನಲ್ಲಿ ಟಾಸ್ ಸೋತ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆಯಿತು. ಪ್ರಮುಖ ಬ್ಯಾಟ್ಸ್‌ಮನ್‌ಗಳ ವೈಫಲ್ಯದ ನಡುವೆಯೂ ದಿನದಾಟದಲ್ಲಿ ಸಮಬಲದ ಪ್ರದರ್ಶನ ನೀಡಿದ ಪಾಕಿಸ್ತಾನ, ದಿನದಂತ್ಯದ ವೇಳೆಗೆ 297 ರನ್‌ಗಳಿಗೆ ಆಲೌಟ್ ಆಯಿತು.
ಪಾಕಿಸ್ತಾನದ ಪರ ಇನ್ನಿಂಗ್ಸ್ ಆರಂಭಿಸಿದ ಮಸೂದ್(0), ಅಬಿದ್ ಅಲಿ(25) ಹಾಗೂ ನಂತರ ಕಣಕ್ಕಿಳಿದ ಹ್ಯಾರಿಸ್ ಸೊಹೆಲ್(1), ಫವಾದ್ ಆಲಂ(2) ಕಿವೀಸ್ ಬೌಲಿಂಗ್ ದಾಳಿಗೆ ತತ್ತರಿಸಿದರು. ಪರಿಣಾಮ 83 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಅಲ್ಪಮೊತ್ತಕ್ಕೆ ಕುಸಿಯುವ ಆಘಾತಕ್ಕೆ ಸಿಲುಕಿತು.
ಈ ವೇಳೆ ಜೊತೆಯಾದ ಅಜ಼ರ್ ಅಲಿ(93) ಹಾಗೂ ನಾಯಕ ರಿಜ್ವಾ಼ನ್(61) ಜವಾಬ್ದಾರಿಯ ಆಟವಾಡಿದರು. ಅಲ್ಲದೇ 5ನೇ ವಿಕೆಟ್‌ಗೆ 88 ರನ್‌ಗಳ ಜೊತೆಯಾಟದ ಕಾಣಿಕೆ ನೀಡುವ ಮೂಲಕ ತಂಡಕ್ಕೆ ಚೇತರಿಕೆ ತಂದುಕೊಟ್ಟರು. ಆದರೆ ಉತ್ತಮವಾಗಿ ಆಡುತ್ತಿದ್ದ ರಿಜ್ವಾ಼ನ್ ವೈಯಕ್ತಿಕ 61 ರನ್‌ಗಿಸಿದ್ದ ವೇಳೆ ಜೇಮಿಸನ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರೆ. ಉತ್ತಮ ಬ್ಯಾಟಿಂಗ್ ಮೂಲಕ ಶತಕದತ್ತ ಸಾಗುತ್ತಿದ್ದ ಅಜ಼ರ್ ಅಲಿ 93 ರನ್‌ಗಳಿಸಿದ್ದ ವೇಳೆ ಮ್ಯಾಟ್‌ಹೆನ್ರಿ ಬೌಲಿಂಗ್‌ನಲ್ಲಿ ಔಟಾಗಿ ನಿರಾಸೆ ಅನುಭವಿಸಿದರು.
ಇವರಿಬ್ಬರ ವಿಕೆಟ್ ಪತನದ ಬಳಿಕ ಬಂದ ಫಹೀಮ್ ಅಶ್ರಫ್(48) ಹಾಗೂ ಚೊಚ್ಚಲ ಟೆಸ್ಟ್ ಪಂದ್ಯವಾಡುತ್ತಿರುವ ಜ಼ಫರ್ ಗೊಹರ್(32) ರನ್‌ಗಳಿಸುವ ಮೂಲಕ ತಂಡಕ್ಕೆ ಆಸರೆಯಾದರು. ನಂತರ ಬಂದ ಯಾವುದೇ ಆಟಗಾರರು ಹೆಚ್ಚು ಕಾಲ ಕಣದಲ್ಲಿ ಉಳಿಯಲಿಲ್ಲ. ಪರಿಣಾಮ ಪಾಕಿಸ್ತಾನ ಮೊದಲ ಇನ್ನಿಂಗ್ಸ್‌ನಲ್ಲಿ 297 ರನ್‌ಗಳಿಗೆ ಆಲೌಟ್ ಆಯಿತು. ಕಿವೀಸ್ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ಕೈಲ್ ಜೇಮಿಸನ್ 69ಕ್ಕೆ 5 ವಿಕೆಟ್ ಪಡೆದು ಮಿಂಚಿದರೆ. ಟಿಮ್ ಸೌಥಿ, ಟ್ರೆಂಟ್ ಬೋಲ್ಟ್ ತಲಾ 2 ಹಾಗೂ ಮ್ಯಾಟ್ ಹೆನ್ರಿ 1 ವಿಕೆಟ್ ಪಡೆದರು.