ಉತ್ಖನನದ ವೇಳೆ ಚಿನ್ನಾಭರಣ, ನಾಣ್ಯ ತುಂಬಿದ ಪೆಟ್ಟಿಗೆ, ಹಳೆಯ ಪಾತ್ರೆಗಳು, ವಿಗ್ರಹಗಳು(Idols) ಮುಂತಾದವುಗಳು ಪತ್ತೆಯಾಗಿವೆ ಎಂಬ ವರದಿಗಳು ಆಗಾಗ್ಗೆ ಕೇಳಿಬರುತ್ತವೆ. ಹೀಗಿರುವಾಗ, ಜಮ್ಮು ಕಾಶ್ಮೀರದಲ್ಲಿ(Jammu-Kashmir) ಮರಳು ಮೇಲೆತ್ತುತ್ತಿದ್ದ ಗ್ರಾಮಸ್ಥರಿಗೆ ಉತ್ಖನನದ ಸಮಯದಲ್ಲಿ ಪುರಾತನ ಪ್ರತಿಮೆ ಪತ್ತೆಯಾಗಿದೆ! ಹೌದು, ಜಮ್ಮು ಮತ್ತು ಕಾಶ್ಮೀರದ ಝೇಲಂ ನದಿಯಲ್ಲಿ ಮೂರು ತಲೆಯ ವಿಷ್ಣುವಿನ ಪುರಾತನ ವಿಗ್ರಹ ಪತ್ತೆಯಾಗಿದ್ದು, ಪುರಾತತ್ವ ಮತ್ತು ವಸ್ತುಸಂಗ್ರಹಾಲಯ ನಿರ್ದೇಶನಾಲಯಕ್ಕೆ ಪೊಲೀಸರು ಹಸ್ತಾಂತರಿಸಿದ್ದಾರೆ.

ಪುಲ್ವಾಮಾ(Pulwama) ಜಿಲ್ಲೆಯ, ಕಾಕಪೋರಾದ ಲೆಲ್ಹಾರ್ ಗ್ರಾಮಸ್ಥರು ಬುಧವಾರ ಝೇಲಂ ನದಿಯಲ್ಲಿ ಮರಳು ಎತ್ತುತ್ತಿದ್ದಾಗ ಹಠಾತ್ತನೆ ಪುರಾತನವಾದ ವಿಷ್ಣುವಿನ ವಿಗ್ರಹ ಪತ್ತೆಯಾಗಿದೆ. ಇದರಿಂದಾಗಿ ಇಲ್ಲಿ ಇನ್ನಷ್ಟು ಮೂರ್ತಿಗಳು ಇರುವ ಸಾಧ್ಯತೆ ಇದೆ. ಪ್ರಸ್ತುತ, ಪ್ರತಿಮೆಯನ್ನು ಆಡಳಿತಾತ್ಮಕ ರಕ್ಷಣೆಯಲ್ಲಿ ತೆಗೆದುಕೊಳ್ಳಲಾಗಿದೆ. ಇದರೊಂದಿಗೆ, ಇನ್ನಷ್ಟು ಉತ್ಖನನ ಮಾಡಿದಾಗ ಪುರಾತತ್ತ್ವ ಶಾಸ್ತ್ರದ ಪ್ರಾಮುಖ್ಯತೆಯ ಇತರ ವಸ್ತುಗಳೂ ಸಿಗುವ ಸಾಧ್ಯತೆ ಇದೆ. ವಿಷ್ಣುವಿನ ಪುರಾತನ ವಿಗ್ರಹ ಸಿಕ್ಕ ವಿಷಯವನ್ನು ಗ್ರಾಮಸ್ಥರೇ ಪುಲ್ವಾಮಾ ಪೊಲೀಸರಿಗೆ ತಿಳಿಸಿದ್ದಾರೆ. ವಿಷಯ ತಿಳಿದು ಅಚ್ಚರಿಗೊಂಡ ಪೊಲೀಸರು, ನಂತರ ಕಾಕಪೋರಾ ಪೊಲೀಸ್ ಠಾಣಾಧಿಕಾರಿ ನೇತೃತ್ವದಲ್ಲಿ ಸ್ಥಳಕ್ಕೆ ತೆರಳಿ ವಿಗ್ರಹವನ್ನು ವಶಕ್ಕೆ ಪಡೆದಿದ್ದಾರೆ.
ನಂತರ ಪೊಲೀಸರು, ಈ ವಿಗ್ರಹದ ಬಗ್ಗೆ ಪುರಾತತ್ವ ಮತ್ತು ವಸ್ತುಸಂಗ್ರಹಾಲಯ ನಿರ್ದೇಶನಾಲಯಕ್ಕೆ ಮಾಹಿತಿ ಕೊಟ್ಟಿದ್ದಾರೆ. ಬಳಿಕ ಎಲ್ಲ ರೀತಿಯ ಕಾನೂನಿನ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಪುರಾತತ್ವ ಮತ್ತು ವಸ್ತುಸಂಗ್ರಹಾಲಯ ಅಧಿಕಾರಿಗಳಿಗೆ ವಿಷ್ಣುವಿನ ಪುರಾತನ ಪ್ರತಿಮೆಯನ್ನು ಹಸ್ತಾಂತರಿಸಲಾಗಿದೆ ಎಂದು ಪುಲ್ವಾಮಾ ಪೊಲೀಸರು ತಿಳಿಸಿದ್ದಾರೆ.
- ಪವಿತ್ರ