ಡೆಹರಾಡೂನ್, ಮೇ. 13: ಕೊರೊನಾ 2ನೇ ಅಲೆಯಿಂದ ತತ್ತರಿಸುತ್ತಿರುವ ದೇಶಕ್ಕೆ ಅನೇಕ ಸಂಸ್ಥೆಗಳು ಕೈ ಜೋಡಿಸಿವೆ. ದೇಶದ ದೈತ್ಯ ಸಂಸ್ಥೆ ರಿಯಲನ್ಸ್ ಇದರಲ್ಲಿ ಮುಂಚೂಣಿಯಲ್ಲಿದೆ. ಕೋವಿಡ್ ಕೇರ್ ಸೆಂಟರ್ ನಿರ್ಮಾಣ, ವಿದೇಶಿ ತಂತ್ರಜ್ಞಾನ ಆಮದು, ತನ್ನ ಸಂಸ್ಥೆಯ ಎಲ್ಲಾ ನೌಕರರಿಗೂ ಹಾಗೂ ಅವರ ಕುಟುಂಬಸ್ಥರಿಗೆ ಉಚಿತವಾಗಿ ಲಸಿಕೆ ನೀಡುವ ಸೇರಿದಂತೆ ಹಲವು ವಿಧಗಳಲ್ಲಿ ರಿಲಯನ್ಸ್ ನೆರವಾಗುತ್ತಿದೆ. ಈಗ ಉತ್ತರಾಖಂಡ್ ರಾಜ್ಯ ಸರ್ಕಾರಕ್ಕೆ ಬರೋಬ್ಬರಿ 5 ಕೋಟಿ ರೂ. ದೇಣಿಗೆ ನೀಡುವ ಮೂಲಕ ಅನಂತ್ ಅಂಬಾನಿ ಮಾದರಿಯಾಗಿದ್ದಾರೆ. ಕೋವಿಡ್ ಪರಿಸ್ಥಿತಿಯನ್ನು ನಿರ್ವಹಿಸಲು ಉತ್ತರಾಖಂಡ್ ವಿಪತ್ತು ನಿರ್ವಹಣಾ ನಿಗಮಕ್ಕೆ ರಿಲಯನ್ಸ್ 5 ಕೋಟಿ ರೂ. ದೇಣಿಗೆ ನೀಡಿದ್ದಾರೆ.
ಕೊರೋನಾ ವಿರುದ್ಧದ ಯುದ್ಧದಲ್ಲಿ ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಉತ್ತರಾಖಂಡ್ ಮುಖ್ಯಮಂತ್ರಿ ತೀರ್ಥ ಸಿಂಗ್ ರಾವತ್ ಅವರಿಗೆ ರಿಲಯನ್ಸ್ ಸಂಸ್ಥೆಯ ಮುಖ್ಯಸ್ಥರಾದ ಮುಕೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಅಧಿಕೃತ ಪತ್ರದ ಮೂಲಕ ತಿಳಿಸಿದ್ದಾರೆ. ಕೊರೋನಾ ಸಂಕಷ್ಟ ಕಾಲದಲ್ಲಿ ದೇಶದ ಜನರಿಗೆ ನೆರವಾಗಲು ರಿಲಯನ್ಸ್ ಸಂಸ್ಥೆ ನಿರಂತರವಾಗಿ ಶ್ರಮಿಸುತ್ತಿದೆ. ಕೋವಿಡ್ ಪರಿಸ್ಥಿತಿಯಲ್ಲಿ ತನ್ನ ರಾಜ್ಯ ಜನತೆಗೆ ಉತ್ತಾರಾಖಂಡ್ ಸರ್ಕಾರ ಕೈಗೊಂಡಿರುವ ಕಾರ್ಯಗಳನ್ನು ಶ್ಲಾಘಿಸುತ್ತೇವೆ. ನಿಮ್ಮ ಈ ಕೊರೋನಾ ಹೋರಾಟಕ್ಕೆ ನಾವು ಕೈಜೋಡಿಸಲು ಇಚ್ಛಿಸುತ್ತೇವೆ. ಹೀಗಾಗಿ ಉತ್ತರಾಖಂಡ್ ರಾಜ್ಯ ವಿಪತ್ತು ನಿರ್ವಹಣಾ ನಿಗಮಕ್ಕೆ 5 ಕೋಟಿ ರೂ. ದೇಣಿಗೆ ನೀಡುತ್ತಿದ್ದೇವೆ. ನಾವೆಲ್ಲಾ ಒಗ್ಗಟ್ಟಿನಿಂದ ಕೊರೋನಾ ವಿರುದ್ಧ ಹೋರಾಡೋಣ ಎಂದು ಪತ್ರದಲ್ಲಿ ತಿಳಿಸಲಾಗಿದೆ.