ನವದೆಹಲಿ, ಜ. 01: ಜನವರಿ 2ರಂದು ಭಾರತದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೋವಿಡ್-19 ಲಸಿಕೆ ಅಭಿಯಾನದ ಸಿದ್ಧತೆಗಾಗಿ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ ವರ್ಧನ್ ದೆಹಲಿ ಸರ್ಕಾರದೊಂದಿಗೆ ಪರಿಶೀಲನಾ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಮಾತನಾಡಿದ ಅವರು, ‘ಕೋವಿಡ್-19 ಲಸಿಕೆ ಅಭಿಯಾನದ ಸೂಕ್ಷ್ಮ ವಿವರಗಳನ್ನು ಸಮಗ್ರವಾಗಿ ಸಂಶೋಧಿಸಲಾಗಿದೆ’ ಎಂದರು.
ಆರೋಗ್ಯ ಕಾರ್ಯಕರ್ತರ ಪಟ್ಟಿಗಳನ್ನು ರಚಿಸಲಾಗಿದ್ದು, ಸರ್ಕಾರದ ಕೋವಿಡ್ ಪ್ಲಾಟ್ ಫಾರ್ಮ್ʼನಲ್ಲಿ ಅಪ್‌ಲೋಡ್ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಚುನಾವಣಾ ಸಂದರ್ಭದಲ್ಲಿ ನಾವು ಹೇಗೆ ತಯಾರಿ ನಡೆಸಿದ್ದೇವೋ ಹಾಗೆಯೇ ಎಲ್ಲ ವೈದ್ಯಕೀಯ ತಂಡಗಳ ಪ್ರತಿಯೊಬ್ಬ ಸದಸ್ಯನೂ ಜವಾಬ್ದಾರಿಯುತವಾಗಿ ತರಬೇತಿ ನೀಡಬೇಕು’ ಎಂದರು.
ಔಷಧ ನಿಯಂತ್ರಕರಿಗೆ ಮತ್ತು ತಜ್ಞರ ಅನುಮೋದನೆಗಾಗಿ ಕನಿಷ್ಠ ಎರಡು ಲಸಿಕೆಗಳು ತಮ್ಮ ಅರ್ಜಿಗಳನ್ನು ಕಳುಹಿಸಿವೆ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.
ಯೋಜನೆ ಮತ್ತು ಅನುಷ್ಠಾನದ ನಡುವಿನ ಕೊಂಡಿಗಳನ್ನು ಪರೀಕ್ಷಿಸಲು ಮತ್ತು ಸವಾಲುಗಳನ್ನು ಗುರುತಿಸಲು ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳು ಜನವರಿ 2ರಂದು ಕೋವಿಡ್-19 ಲಸಿಕೆಯನ್ನ ಪ್ರಯೋಗಿಸಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಡಿಸೆಂಬರ್ 28 ಮತ್ತು 29ರಂದು ನಾಲ್ಕು ರಾಜ್ಯಗಳಲ್ಲಿ ಈ ಡ್ರಿಲ್ ನಡೆಸಲಾಗಿತ್ತು. ಇನ್ನು ಈ ಚಟುವಟಿಕೆಯನ್ನು ಎಲ್ಲಾ ರಾಜ್ಯ ರಾಜಧಾನಿಗಳಲ್ಲಿ ಕನಿಷ್ಠ 3 ಅಧಿವೇಶನ ಸ್ಥಳಗಳಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಕೆಲವು ರಾಜ್ಯಗಳು ಕಷ್ಟಕರವಾದ ಪ್ರದೇಶಗಳಲ್ಲಿ/ ಕಡಿಮೆ ಲಾಜಿಸ್ಟಿಕ್ ಬೆಂಬಲವನ್ನು ಹೊಂದಿರುವ ಜಿಲ್ಲೆಗಳನ್ನು ಒಳಗೊಂಡಿರಲಿವೆ. ಆದರೆ ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳು ತಮ್ಮ ರಾಜಧಾನಿಯನ್ನು ಹೊರತುಪಡಿಸಿ ಇತರ ಪ್ರಮುಖ ನಗರಗಳಲ್ಲಿ ಲಸಿಕೆ ತಾಲಿಮು ನಿಗದಿ ಮಾಡುವ ಸಾಧ್ಯತೆಗಳಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.