ನಾಟಿಂಗ್ಹ್ಯಾಮ್, ಆ. 09: ಮಳೆರಾಯನ ಅಬ್ಬರದಿಂದಾಗಿ ಪ್ರವಾಸಿ ಭಾರತ ಹಾಗೂ ಅತಿಥೇಯ ಇಂಗ್ಲೆಂಡ್ ತಂಡಗಳ ನಡುವಿನ ಪ್ರಥಮ ಟೆಸ್ಟ್ ಪಂದ್ಯ ನೀರಸ ಡ್ರಾನಲ್ಲಿ ಅಂತ್ಯಗೊಂಡಿದೆ.
ಅತಿಥೇಯ ಇಂಗ್ಲೆಂಡ್ ನೀಡಿದ್ದ 209 ರನ್ ಗುರಿಬೆನ್ನತ್ತಿದ ಭಾರತ 4ನೇ ದಿನದಾಟದಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 52 ರನ್ ಗಳಿಸಿತ್ತು. ಹೀಗಾಗಿ 5ನೇ ಹಾಗೂ ಅಂತಿಮ ದಿನದಾಟ ನಿರ್ಣಾಯಕ ಘಟ್ಟ ತಲುಪಿತ್ತು. ಆದರೆ ಕೊನೆಯ ದಿನದಾಟಕ್ಕೆ ವರುಣನ ಅವಕೃಪೆ ಎದುರಾದ ಪರಿಣಾಮ ದಿನದಾಟದ ಎರಡು ಅವಧಿಯ ಆಟ ಮಳೆಯಿಂದ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು.
ಹೀಗಾಗಿ ಅಂತಿಮ ದಿನದಂದು ಪಂದ್ಯದ ಗೆಲುವಿಗೆ ಅಗತ್ಯವಿದ್ದ 157 ರನ್ ಗಳಿಸಿ, ಸರಣಿಯಲ್ಲಿ 1-0 ಮುನ್ನಡೆ ಸಾಧಿಸುವ ಟೀಂ ಇಂಡಿಯಾ ನಿರೀಕ್ಷೆ ಹುಸಿಯಾಯಿತು. ಉಭಯ ತಂಡಗಳ ನಡುವಿನ ಐದು ಟೆಸ್ಟ್ ಪಂದ್ಯಗಳ ಸರಣಿಯ ದ್ವಿತೀಯ ಟೆಸ್ಟ್ ಪಂದ್ಯ ಆಗಸ್ಟ್ 12ರಿಂದ ಕ್ರಿಕೆಟ್ ಲಾರ್ಡ್ಸ್ ಅಂಗಳದಲ್ಲಿ ನಡೆಯಲಿದೆ.