ಸರ್ಕಾರ ಪ್ಲಾಸ್ಟಿಕ್ ಬಳಕೆಯ ವಿರುದ್ಧ ಹಲವಾರು ಷರತ್ತುಗಳನ್ನು ಜಾರಿಗೊಳಿಸಿದ್ದರೂ, ಅದರಿಂದಾಗುವ ಪರಿಸರ ಮಾಲಿನ್ಯ ಕಡಿಮೆಯಾಗುತ್ತಿಲ್ಲ.
ಮಾನವ ಜೀವನದ ಅವಿಭಾಜ್ಯ ಅಂಗವಾಗಿರುವ ಏಕ-ಬಳಕೆಯ ಪ್ಲಾಸ್ಟಿಕ್ ಆಧುನಿಕ ಜೀವನ ಶೈಲಿಯ ನಂಜಾಗಿ ಪರಿಣಮಿಸಿರುವುದರ ಜತೆಗೆ ಜಲಮೂಲಗಳು ಕಸ ಎಸೆಯುವ ತಾಣಗಳಾಗಿ ಮಾರ್ಪಡುತ್ತಿವೆ.
ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ನಿಂದ ಆಗುವ ತೊಂದರೆ ಅರಿತಿರುವ ಹಿರಿಯ ಜೀವವೊಂದು ಪ್ರತಿನಿತ್ಯ, ಕೆರೆಯೊಂದನ್ನು ಸ್ವಚ್ಛಗೊಳಿಸುವ ಕಾಯಕಕ್ಕೆ ತಮ್ಮನ್ನು ಮುಡಿಪಾಗಿಟ್ಟಿದ್ದಾರೆ.
ಹೌದು, ಇವರ ಹೆಸರು ಎನ್.ಎಸ್.ರಾಜಪ್ಪನ್, ಪಾರ್ಶ್ವವಾಯುವಿಗೆ ಒಳಗಾಗಿರುವ ಇವರು ತಮ್ಮ 69ನೇ ವಯಸ್ಸಿನಲ್ಲೂ ಪ್ರತಿದಿನ ವೆಂಬನಾಡ್ ಸರೋವರದಿಂದ ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸಿ ಜೀವನ ಸಾಗಿಸುವುದರ ಜತೆಗೆ ಪರಿಸರವನ್ನು ಸ್ವಚ್ಛವಾಗಿಡುತ್ತಿದ್ದಾರೆ.
ಕೇರಳದ ಕೊಟ್ಟಾಯಮ ಜಿಲ್ಲೆಯವರಾದ ಇವರು ಪ್ರತಿದಿನ ದೋಣಿ ಬಾಡಿಗೆ ಪಡೆದು ವೆಂಬನಾಡ್ ಕೆರೆಯಲ್ಲಿರುವ ಪ್ಲಾಸ್ಟಿಕ್ ಕಸವನ್ನು ತೆಗೆಯುತ್ತಾರೆ.
ಬಾಲ್ಯದಲ್ಲೇ ಪೋಲಿಯೋಗೆ ತುತ್ತಾದ ರಾಜಪ್ಪನ್, ಮೊಣಕಾಲಿನ ಕೆಳಭಾಗ ಪಾರ್ಶ್ವವಾಯುಪೀಡಿತವಾಯಿತು. ಈ ಕಾರಣದಿಂದ ಯಾವ್ಯಾವುದೋ ಕೆಲಸ ಮಾಡುವಂತಾಯಿತು. ಜೀವನ ನಡೆಸಲು ದೋಣಿ ಸಾಗಿಸುವ ಕಾಯಕ ಮಾಡುವ ರಾಜಪ್ಪನ್, ಹೊಟ್ಟೆಪಾಡಿನ ಜೊತೆಗೆ ನಿತ್ಯವೂ ಕೆರೆ ಸ್ವಚ್ಛಗೊಳಿಸುವ ಮೂಲಕ ಪರಿಸರ ಸಂರಕ್ಷಣೆ ಮಾಡಿಕೊಂಡು ಬಂದಿದ್ದಾರೆ.
ಕಳೆದ ಹಲವು ವರ್ಷದಿಂದಲೂ ದೋಣಿ ಚಲಾಯಿಸುತ್ತಾ ಜೀವನ ದೂಡುತ್ತಿರುವ ಇವರು, ತಮಗೊಂದು ದೊಡ್ಡ ದೋಣಿ ಬೇಕಾಗಿದೆ, ಅದರಿಂದ ನಾನು ಹೆಚ್ಚು ಸಮಯವನ್ನು ಇಲ್ಲೆ ಕಳೆಯಬಹುದು ಮತ್ತು ಹೆಚ್ಚು ಪ್ಲಾಸ್ಟಿಕ್ ಅನ್ನು ಸಂಗ್ರಹಿಸಬಹುದು ಎನ್ನುತ್ತಾರೆ..
ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರಹಿಸಿದ ನಂತರ ಅವುಗಳನ್ನು ವಿವಿಧ ಚೀಲಗಳಿಗೆ ತುಂಬಿಡುತ್ತಾರೆ, ನಂತರ ೨, ೩ ತಿಂಗಳಿಗೊಮ್ಮೆ ಸ್ಥಳೀಯ ಸಂಸ್ಥೆ ಅವುಗಳನ್ನು ತೆಗೆದುಕೊಳ್ಳುತ್ತದೆ. ಲಾಕ್ಡೌನ್ನಿಂದ ರಾಜ್ಯಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಕುಸಿದಿದ್ದು, ಅದರ ಪರಿಣಾಮ ಕೆರೆಯಲ್ಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಎಸೆಯುವುದು ಕಡಿಮೆಯಾಗಿದೆ. ಕೋವಿಡ್-19 ರಾಜಪ್ಪನ್ ಅವರ ಆದಾಯಕ್ಕೆ ಹೊಡೆತ ನೀಡಿದ್ದರು, ಖುಷಿಯಿಂದಲೆ ಕೆರೆಯನ್ನು ಸ್ವಚ್ಛಗೊಳಿಸುತ್ತಾರೆ.
ಕೆರೆಯಲ್ಲಿ ಬಿದ್ದ ಪ್ಲಾಸ್ಟಿಕ್ ಸಂಗ್ರಹಿಸುವುದರಿಂದ ನನಗೆ ಹೆಚ್ಚೆನು ಸಿಗುವುದಿಲ್ಲ. ಪೂರ್ತಿ ದೋಣಿಯಷ್ಟು ಪ್ಲಾಸ್ಟಿಕ್ ಬಾಟಲಿಗಳಿದ್ದರು ಅದು 1 ಕೆ.ಜಿ.ಗಿಂತಲೂ ಕಡಿಮೆಯಾಗಿರುತ್ತದೆ. ಆದರೆ ಯಾರಾದರೂ ಕಸವನ್ನು ತೆಗೆಯಲೆಬೇಕು. ನನ್ನ ಪೂರ್ತಿ ಜೀವನವನ್ನು ಈ ನೀರಿನ ಸುತ್ತಲೆ ಕಳೆದಿದ್ದೇನೆ. ನನ್ನ ಕೈಲಾದಷ್ಟು ಕೆಲಸ ಮಾಡುತ್ತಿದ್ದೇನೆ ಎನ್ನುತ್ತಾರೆ ರಾಜಪ್ಪನ್.