ಕಾಲು ಕೆರೆದು ಜಗಳ ಮಾಡುವುದು ಶತ್ರು ದೇಶಗಳ ಸಾಮಾನ್ಯ ಗುಣ. ಭಾರತದ ಮೇಲೆ ಪಾಕಿಸ್ತಾನ ಮತ್ತು ಚೀನಾ ಮೊದಲಿನಿಂದಲೂ ಕಾಲು ಕೆರೆದು ಜಗಳ ಮಾಡುತ್ತಲೆ ಇದೆ. ಭಾರತ ಕೂಡ ಈ ಜಗಳಕ್ಕೆ ಸರಿಯಾದ ಉತ್ತರ ನೀಡುತ್ತಿದೆ.
ಹಿಂದೆ ಒಮ್ಮೆ ಹೀಗೆ ಕಾಲು ಕೆರೆದು ಜಗಳಕ್ಕೆ ಬಂದಿದ್ದ ಚೀನಾ ದೇಶಕ್ಕೆ ಅಟಲ್ ಬಿಹಾರಿ ವಾಜಪೇಯಿ ವಿಭಿನ್ನ ರೀತಿಯಲ್ಲಿ ಉತ್ತರ ನೀಡಿದ್ದರಂತೆ. ಭಾರತದಲ್ಲಿದ್ದ ಚೀನಾ ರಾಯಭಾರ ಕಚೇರಿಗೆ 800 ಕುರಿಗಳನ್ನು ನುಗ್ಗಿಸಿ ಪ್ರತಿಭಟಿಸಿ ಚೀನಾದ ಸುಳ್ಳು ಆರೋಪಕ್ಕೆ ಹಾಸ್ಯಸ್ಪದ ರೀತಿಯಲ್ಲಿ ಉತ್ತರ ನೀಡಿದ್ದರಂತೆ. ಈ ವಿಷಯ ಈಗ ಬೆಳಕಿಗೆ ಬಂದಿದೆ. 1965 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಜನಸಂಘದಿಂದ ಸಂಸತ್ಗೆ ಆಯ್ಕೆಯಾಗಿದ್ದರು. ಪಾಕಿಸ್ತಾನದ ನುಸುಳುಕೋರರ ಸಂಖ್ಯೆ ಅಂದು ಕೂಡ ತಾರಕಕ್ಕೇರಿತ್ತು. ಈ ಸಂದರ್ಭವನ್ನು ಬಳಸಿಕೊಂಡು ಚೀನಾ ಭಾರತದ ಮೇಲೆ ಕಾಲು ಕೆರೆದು ಜಗಳಕ್ಕೆ ನಿಂತಿತ್ತು. ಅಂದು ಮಹಾರಾಜರ ಆಡಳಿತದಲ್ಲಿದ್ದ ಸಿಕ್ಕಿಂ ರಾಜ್ಯವನ್ನು ತಮ್ಮದಾಗಿಸಿಕೊಳ್ಳಲು ಹೊಂಚುಹಾಕಿತ್ತು ಚೀನಾ.
1965 ರಲ್ಲಿ ಲಾಲ್ಬಹಾದ್ದೂರ್ ಶಾಸ್ತ್ರಿ ಅವರು ಪ್ರಧಾನ ಮಂತ್ರಿಯಾಗಿದ್ದರು. ಈ ವೇಳೆಯಲ್ಲಿ ಅವರಿಗೆ ಚೀನಾ ಒಂದು ಪತ್ರ ಬರೆದು, ಗಡಿ ಭದ್ರತೆಯಲ್ಲಿ ತೊಡಗಿದ್ದ ಭಾರತದ ಯೋಧರು ನಮ್ಮ 800 ಕುರಿಗಳು ಮತ್ತು 59 ಯಾಕ್ಗಳನ್ನು ಕದ್ದಿದ್ದಾರೆ ತಕ್ಷಣ ಅವುಗಳನ್ನು ಹಿಂದಿರುಗಿಸಬೇಕು. ಇಲ್ಲವಾದರೆ 1962ರಲ್ಲಿ ಮಾಡಿದಂತೆ ಯುದ್ಧ ಸಾರಿ ಪಾಠ ಕಲಿಸುವುದಾಗಿ ಬೆದರಿಕೆ ಹಾಕಿತ್ತು. ಬೆದರಿಕೆಯ ಪತ್ರ ಓದಿದ ಪ್ರಧಾನಿ ಶಾಸ್ತ್ರಿಯವರು ವಿಚಲಿತರಾಗದೆ ನಮ್ಮ ಯೋಧರು ಯಾವುದೇ ಕುರಿಗಳನ್ನಾಗಲಿ, ಯಾಕ್ಗಳನ್ನಾಗಲಿ ಕದ್ದಿಲ್ಲ. ಇದು ಸುಳ್ಳು ಆರೋಪ ಎಂದು ಸ್ಪಷ್ಟನೆ ನೀಡಿ ಚೀನಾಕ್ಕೆ ಪತ್ರ ಮರು ಪತ್ರ ರವಾನಿಸಿದ್ದರು.
ಚೀನಾ ಮಾಡಿದ ನಾಟಕದ ಬಗ್ಗೆ ತಿಳಿದ ಅಟಲ್ ಬಿಹಾರಿ ವಾಜಪೇಯಿ ಅವರು 800 ಕುರಿಗಳ ಮಂದೆಯೊಂದಿಗೆ ನವದೆಹಲಿಯಲ್ಲಿದ್ದ ಚೀನಾ ರಾಯಭಾರ ಕಚೇರಿಗೆ ತೆರಳಿದರು. ಕುರಿಗಳ ಮೇಲೆ, ಬೇಕಾದರೆ ನಮ್ಮನ್ನು ತಿನ್ನಿ, ಆದರೆ ನಮ್ಮ ದೇಶಕ್ಕೆ ತೊಂದರೆಕೊಡಬೇಡಿ ಎಂಬ ಭಿತ್ತಿ ಪತ್ರಗಳನ್ನು ಕುರಿಗಳಿಗೆ ಅಂಟಿಸಿ ನಾಟಕೀಯವಾಗಿ ಪ್ರತಿಭಟನೆ ನಡೆಸಿದ್ದರು. ಈ ವಿಷಯ ತಿಳಿದ ಚೀನಾ ಲಾಲ್ ಬಹಾದ್ದೂರ್ ಶಾಸ್ತ್ರಿಯವರಿಗೆ ಮತ್ತೊಂದು ಪತ್ರ ಬರೆದು ಭಾರತ ಸರ್ಕಾರದ ಕುಮ್ಮಕ್ಕಿನಿಂದ ತಮ್ಮ ವಿರುದ್ಧ ಪ್ರತಿಭಟನೆ ನಡೆಸಿ, ನಮ್ಮನ್ನು ಅವಮಾನಿಸಿದ್ದೀರ ಎಂದು ಆಕ್ರೋಶ ವ್ಯಕ್ತಪಡಿಸಿತ್ತು. ಇದಕ್ಕೆ ಪ್ರತಿಯಾಗಿ ಮತ್ತೊಂದು ಪತ್ರ ಬರೆದಿದ್ದ ಶಾಸ್ತ್ರಿಯವರು ಈ ಪ್ರತಿಭಟನೆಗೂ ಭಾರತ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ನೀವು ಮಾಡಿರುವ ಸುಳ್ಳು ಆರೋಪ ಮತ್ತು ಕ್ಷುಲ್ಲಕ ಕಾರಣಕ್ಕೆ ದಾಳಿ ಮಾಡುವ ಬೆದರಿಕೆಗೆ ದೆಹಲಿ ನಾಗರಿಕರು ಸ್ಪಂದಿಸಿ ಮಾಡಿರುವ ಶಾಂತಿಯುತ ಪ್ರತಿಭಟನೆ ಇದು ಎಂದು ಹೇಳಿದ್ದರು. ಈಗೇ ಎಷ್ಟೋ ಭಾರಿ ಚೀನಾ ಸುಳ್ಳು ಆರೋಪಗಳನ್ನು ಮಾಡಿ ಕಾಲು ಕೆರೆದುಕೊಂದು ಯುದ್ಧ ಮಾಡಿರುವುದೇ ಹೆಚ್ಚು. ಹೀಗೆ ಸುಳ್ಳು ನೆಪ ಹೇಳಿ 1967 ರಲ್ಲು ಕೂಡ ಚೀನಾ ಭಾರತದ ಮೇಲೆ ದಾಳಿ ಮಾಡಿತ್ತು.