ಬೆಂಗಳೂರು, ಡಿ.4; ಮುಂದಿನ ವರ್ಷ ಕಲಬುರ್ಗಿಯಲ್ಲಿ ನಡೆಯಲಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಡಾ.ಎಚ್ ಎಸ್ ವೆಂಕಟೇಶಮೂರ್ತಿ ಅವರು ಆಯ್ಕೆಯಾಗಿದ್ದಾರೆ. ಬೆಂಗಳೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ ನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ.
2020 ಫೆಬ್ರುವರಿ 5, 6 ಮತ್ತು 7 ರಂದು ಶರಣರ ನಾಡು ಕಲಬುರಗಿಯಲ್ಲಿ, ಕಲಬುರಗಿ ವಿಶ್ವವಿದ್ಯಾನಿಲಯದ ಆವರಣದಲ್ಲಿ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಈ ಹಿಂದೆ 1928 ರಲ್ಲಿ, 1949 ರಲ್ಲಿ ಹಾಗೂ 1987 ರಲ್ಲಿ ಕಲಬುರಗಿಯಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆದಿದ್ದವು..
76 ವಯಸ್ಸಿನ ಎಚ್ ಎಸ್ ವೆಂಕಟೇಶಮೂರ್ತಿ ಅವರು, ಕನ್ನಡ ಸಾರಸ್ವತ ಲೋಕದಲ್ಲಿ ಎಚ್‌ಎಸ್‌ವಿ ಮೇಷ್ಟ್ರು ಎಂದೇ ಜನಜನಿತರಾಗಿದ್ದಾರೆ. ಬೆಂಗಳೂರಿನ ಸೇಂಟ್ ಜೋಸೆಪ್ ಕಾಮರ್ಸ್ ಕಾಲೇಜಿನಲ್ಲಿ ದಶಕಗಳ ಕಾಲ ಪ್ರಾಧ್ಯಾಪಕರಾಗಿದ್ದ ಅವರು, ಕನ್ನಡ ಕಟ್ಟುವ ಕಾಯಕದಲ್ಲಿ ಇಂದಿಗೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.