- 9 ತಿಂಗಳ ಬಳಿಕ ಭೂಮಿಗೆ ಬಂದ ಸುನೀತಾ ಮತ್ತು ಬಚ್ ವಿಲ್ಮೋರ್ (9-month space mission ends)
- ನುಡಿದಂತೆ ನಡೆದಿದ್ದೇವೆ ಎಂದು ಹೆಮ್ಮೆಯಿಂದ ಹೇಳಿದ ವೈಟ್ಹೌಸ್
- ಸ್ಪೇಸ್ ಎಕ್ಸ್ ಮತ್ತು ನಾಸಾಗೆ ಅಭಿನಂದನೆ ಸಲ್ಲಿಸಿದ ಎಲಾನ್ ಮಸ್ಕ್
ಸುನಿತಾ ವಿಲಿಯಮ್ಸ್ (Sunita Williams) ಹಾಗೂ ಬುಚ್ ವಿಲ್ಮೋರ್ (Butch Wilmore) ಜೂನ್ 5, 2024ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿದ್ದರು. ಅವರ ಪ್ರವಾಸ ಕೇವಲ 8 ದಿನಗಳದ್ದಾಗಿತ್ತು. ಆದರೆ ಅವರು ಪ್ರಯಾಣಿಸಿದ್ದ ಬೋಯಿಂಗ್ ಸ್ಟಾರ್ಲೈನರ್ ನೌಕೆಯಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಪರಿಣಾಮ 9 ತಿಂಗಳ ಕಾಲ ಸುನಿತಾ ವಿಲಿಯಮ್ಸ್ ಅಲ್ಲಿಯೇ ಇರಬೇಕಾಯಿತು.
ಇದೀಗ ಅವರು ಸುರಕ್ಷಿತವಾಗಿ ಭೂಮಿಗೆ ವಾಪಸ್ ಆಗಿದ್ದಾರೆ.NASA ನೀಡಿರುವ ಮಾಹಿತಿ ಪ್ರಕಾರ, ಸುನಿತಾ ವಿಲಿಯಮ್ಸ್ ಮತ್ತು ಅವರ ತಂಡ 900 ಗಂಟೆಗಳ ಸಂಶೋಧನೆ ಪೂರ್ಣಗೊಳಿಸಿದೆ. 150ಕ್ಕೂ ಹೆಚ್ಚು ಪ್ರಯೋಗಗಳನ್ನು ನಡೆಸಿ ಹೊಸ ದಾಖಲೆ ಬರೆದಿದ್ದಾರೆ.
ಬಾಹ್ಯಾಕಾಶದಲ್ಲಿ (Space) ಹೆಚ್ಚು ಕಾಲ ಕಳೆದ ಮಹಿಳೆ ಎಂಬ ದಾಖಲೆಗೂ ಪಾತ್ರರಾಗಿದ್ದಾರೆ. ಬಾಹ್ಯಾಕಾಶ ನಿಲ್ದಾಣದ ಹೊರಗೆ 62 ಗಂಟೆ 9 ನಿಮಿಷಗಳನ್ನು ಕಳೆದಿದ್ದಾರೆ. 9 ಬಾರಿ ಬಾಹ್ಯಾಕಾಶ ನಡಿಗೆ ಮಾಡಿದ್ದಾರೆ.
ಇನ್ನು ಈ ವಿಷಯ ರಾಜಕೀಯವಾಗಿಯೂ ಕೂಡ ಅಮೆರಿಕಾದಲ್ಲಿ ಚರ್ಚೆಗೆ ಬಂದಿತ್ತು. ಜಾಗತಿಕವಾಗಿಯೂ ಕೂಡ ಪರ ವಿರೋಧಗಳ ಮಾತುಗಳು ಕೇಳಿ ಬಂದಿದ್ದವು. ಆದ್ರೆ ಟ್ರಂಪ್ ಅಧಿಕಾರವಹಿಸಿಕೊಂಡ ಎರಡೇ ತಿಂಗಳಿಗೆ ಈಗ ಗಗನಯಾನಿಗಳು ಸುರಕ್ಷಿತವಾಗಿ ವಾಪಸ್ ಬಂದಿದ್ದಾರೆ.

ಸ್ಪೇಸ್ ಎಕ್ಸ್ನ ಕ್ರ್ಯೂ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯ ಮೂಲಕ ವಿಲಿಯಮ್ಸ್ ಹಾಗೂ ವಿಲ್ಮೋರ್ರನ್ನು ಭೂಮಿಗೆ ಮರಳಿ ತಂದಿದ್ದು. ಸುಮಾರು 3.30ಕ್ಕೆ ಫ್ಲೋರಿಡಾದ ಕರಾವಳಿ ತೀರದಲ್ಲಿ (Florida’s coastline) ಇಬ್ಬರು ಗಗನಯಾತ್ರಿಗಳು ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದಾರೆ ಎಂದು ವೈಟ್ಹೌಸ್ ಟ್ವೀಟ್ ಮಾಡಿದೆ.
ವೈಟ್ಹೌಸ್ನ ಅಧಿಕೃತ ಎಕ್ಸ್ ಖಾತೆಯಲ್ಲಿ, ಗಗನಯಾತ್ರಿಗಳನ್ನು ಸುರಕ್ಷಿತವಾಗಿ ವಾಪಸ್ ಕರೆತರುವುದಾಗಿ ನಾವು ಭರವಸೆ ಕೊಟ್ಟಿದ್ದೇವು. ಆ ಭರವಸೆಯನ್ನು ಈಡೇರಿಸಿದ್ದೇವೆ. ನಮ್ಮ ಅಧ್ಯಕ್ಷ ಟ್ರಂಪ್ ಗಗನಯಾತ್ರಿಗಳನ್ನು ರಕ್ಷಿಸುವುದಾಗಿ ವಾಗ್ದಾನ ಮಾಡಿದ್ದರು ಅದರಂತೆ 9 ತಿಂಗಳುಗಳ ಬಳಿಕ ಅವರನ್ನು ರಕ್ಷಿಸಲಾಗಿದೆ ಇಂದು ಗಗನಯಾನಿಗಳು ಗಲ್ಫ್ ಆಫ್ ಅಮೆರಿಕಾದಲ್ಲಿ (Gulf of America) ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದಾರೆ ಎಂದು ಹೇಳಿದೆ.
ಬಾಹ್ಯಾಕಾಶ ನಿಲ್ದಾಣದಿಂದ 41 ದಿನಗಳ ಒಳಗೆ ಸುನೀತಾ ವಿಲಿಯಮ್ಸ್ ವಾಪಸ್ಸಾಗುತ್ತಾರೆಂದು ಭರವಸೆ ನೀಡಿದ ನಾಸಾ.
ಇನ್ನು ಇದೇ ವಿಚಾರವಾಗಿ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಾಸಾಗೆ ಅಭಿನಂದನೆ ಸಲ್ಲಿಸಿದ್ದಾರೆ. ಇನ್ನು ಸ್ಪೇಸ್ ಎಕ್ಸ್ನ ಮುಖ್ಯಸ್ಥರಾಗಿರುವ ಎಲಾನ್ ಮಸ್ಕ್ (Elon Musk), ಸ್ಪೇಸ್ ಎಕ್ಸ್ ಹಾಗೂ ನಾಸಾಗೆ ಅಭಿನಂದನೆ ಸಲ್ಲಿಸಿದ್ದಾರೆ. ಸ್ಪೇಸ್ ಎಕ್ಸ್ ಮತ್ತು ನಾಸಾ ಗಗನಯಾನಿಗಳ ಮತ್ತೊಂದು ಸುರಕ್ಷಿತವಾಗಿ ಕರೆತರುವಲ್ಲಿ ಯಶಸ್ವಿಯಾಗಿವೆ ಅಭಿನಂದನೆಗಳು ಎಂದು ಹೇಳಿದ್ದಾರೆ.
ಸುನಿತಾ ವಿಲಿಯಮ್ಸ್ ಅವರು ಭೂಮಿಗೆ ವಾಪಸ್ಸಾಗಿರುವುದಕ್ಕೆ ಭಾರತೀಯರು ಸಂತಸ ವ್ಯಕ್ತಪಡಿಸುತ್ತಿದ್ದು, ಅದರಲ್ಲಿಯೂ ಸುನಿತಾ ಅವರ ಪೂರ್ವಜರ ಊರು ಗುಜರಾತಿನ ಮೆಹ್ಲಾನ ಜಿಲ್ಲೆಯಲ್ಲಿರುವ ಜುಲಸಾನದಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ.
ಸುನಿತಾ ತಂದೆ ದೀಪಕ್ ಪಾಂಡ್ಯ ಪೂರ್ವಜರ ಊರು ಜುಲಾಸಾನ (9-month space mission ends) ಗ್ರಾಮಸ್ಥರು ಅವರ ಸುರಕ್ಷತೆಗಾಗಿ ದೇವಸ್ಥಾನಗಳಲ್ಲಿ ಜ್ಯೋತಿ ಬೆಳಗಿಸಿ ಪ್ರಾರ್ಥನೆ ಸಲ್ಲಿಸಿದ್ದರು. ಇದೀಗ ಕೊನೆಗೂ ಸುನಿತಾ ಅವರು ಭುವಿಗೆ ಮರಳಿರುವುದಕ್ಕೆ ಸಂಭ್ರಮವನ್ನಾಚರಿಸುತ್ತಿದ್ದಾರೆ.