ಹಾಸ್ಯ ನಟ ವೈಜನಾಥ ಬಿರಾದಾರ್ ಪ್ರಧಾನ ಪಾತ್ರದಲ್ಲಿರುವ ಸಿನಿಮಾ `90 ಹೊಡಿ ಮನೀಗ್ ನಡಿ’ಯ ಚಿತ್ರೀಕರಣಕ್ಕೆ ಇತ್ತೀಚೆಗಷ್ಟೇ ಕುಂಬಳಕಾಯಿ ಶಾಸ್ತ್ರ ನಡೆಸಲಾಗಿದೆ.
“ಅಮ್ಮ ಟಾಕೀಸ್ ಬಾಗಲಕೋಟೆ” ಬ್ಯಾನರಿನಡಿ ತಯಾರಾಗುತ್ತಿರುವ ಈ ಸಿನಿಮಾಗೆ ಉಮೇಶ್ ಬಾದರದಿನ್ನಿ ಮತ್ತು ನಾಗರಾಜ್ ಅರೆಹೊಳೆ ಜಂಟಿ ನಿರ್ದೇಶನ ಮಾಡಿದ್ದು, ರತ್ನಮಾಲಾ ಬಾದರದಿನ್ನಿ ನಿರ್ಮಾಣದಲ್ಲಿ ಟಾಕಿ, ಸಾಂಗ್, ಫೈಟ್ ಸೇರಿದಂತೆ ಈ ಹಿಂದೆ ಬೆಂಗಳೂರು, ಬಾಗಲಕೋಟೆ, ಬಿಡದಿಯಲ್ಲಿ ಚಿತ್ರೀಕರಣ ನಡೆಸಲಾಗಿತ್ತು.
ಚಿತ್ರದ ಕೊನೆಯ ಹಂತದ ಚಿತ್ರೀಕರಣವನ್ನು ಬೆಂಗಳೂರಿನ ಮಾಗಡಿ ರಸ್ತೆಯ ಸುತ್ತಮುತ್ತ ಶೂಟಿಂಗ್ ಮಾಡಿರುವ ಚಿತ್ರತಂಡ ಚಿತ್ರೀಕರಣಕ್ಕೆ ಕುಂಬಳಕಾಯಿ ಕಾಣಿಸಿದೆ. ತಮ್ಮ ವೃತ್ತಿ ಜೀವನದ 500ನೇ ಚಿತ್ರದಲ್ಲಿ ಕಮರ್ಷಿಯಲ್ ನಾಯಕನಾಗಿ ನಟಿಸುತ್ತಿರುವ ಬಿರಾದಾರ್ ಜೊತೆ ಹಿರಿಯ ನಟ ಕರಿಸುಬ್ಬು, ಡೇರಿಂಗ್ ಸ್ಟಾರ್ ಧರ್ಮ, ಪ್ರಶಾಂತ್ ಸಿದ್ದಿ, ಅಭಯ್ ವೀರ್, ಆರ್ ಡಿ ಬಾಬು, ವಿವೇಕ್ ಜಂಬಗಿ, ನೀತಾ, ಪ್ರೀತು ಪೂಜಾ, ರುದ್ರಗೌಡ ಬಾದರದಿನ್ನಿ, ಹೊಸ್ಕೋಟೆ ಮುರುಳಿ, ಎಲ್ಐಸಿ ಲೋಕೇಶ್ ಮುಂತಾದವರು ತೆರೆ ಹಂಚಿಕೊಂಡಿದ್ದಾರೆ. ಇನ್ನು ಕವಿರತ್ನ ಡಾ. ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ, ಕಿರಣ್ ಶಂಕರ್ & ಶಿವು ಭೇರಗಿ ಸಂಗೀತ, ರಾಕಿ ರಮೇಶ್ ಸಾಹಸ, ಯುಡಿವಿ ವೆಂಕಿ ಸಂಕಲನ ಚಿತ್ರಕ್ಕಿದೆ. ಹಾಸ್ಯ ಕಲಾವಿದರ ದುಂಡು ಕಟ್ಟಿಕೊಂಡು, ಅಂದುಕೊಂಡಂತೆ ಎಲ್ಲವನ್ನೂ ಚಿತ್ರೀಕರಿಸಿಕೊಂಡಿರುವ ನೈಂಟಿ ತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸ ಶುರುವಿಟ್ಟುಕೊಳ್ಳುವ ತರಾತುರಿಯಲ್ಲಿದೆ. ನಿರೀಕ್ಷೆಯಂತೆ ಇದೊಂದು ಹಾಸ್ಯ ಪ್ರಧಾನ ಚಿತ್ರವಾಗಿದ್ದು ಬಿರಾದಾರ್ ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿಸಿದೆ.