ತಿರುವನಂತಪುರಂ, ಮೇ. 06: ಕೇರಳದಲ್ಲಿ ಕೊರೊನಾವೈರಸ್ ಸೋಂಕು ನಿಯಂತ್ರಣಕ್ಕಾಗಿ ಮೇ 8ರಿಂದ 16ರವರೆಗೆ ಸಂಪೂರ್ಣ ಲಾಕ್ಡೌನ್ ಘೋಷಿಸಲಾಗಿದೆ. ಮೇ8 ಬೆಳಗ್ಗೆ 6 ಗಂಟೆಯಿಂದ ಲಾಕ್ಡೌನ್ ಆರಂಭವಾಗಲಿದೆ. ಕಳೆದ ಒಂದು ವಾರಗಳಲ್ಲಿ ಕೇರಳದಲ್ಲಿ ರೋಗಿಗಳ ಸಂಖ್ಯೆ ಏರಿಕೆಯಾಗುತ್ತಲೇ ಇರುವುದರಿಂದ ಈ ಕ್ರಮಕೈಗೊಳ್ಳಲಾಗಿದೆ. ಅಗತ್ಯ ವಸ್ತುಗಳನ್ನು ಮಾರುವ ಅಂಗಡಿಗಳು ಮಾತ್ರ ತೆರೆಯಲಿವೆ. ನಿರ್ದಿಷ್ಟ ಸಮಯಗಳಲ್ಲಿ ಮಾತ್ರ ಇದನ್ನು ತೆರೆಯಲು ಅನುಮತಿ ಇದೆ. ಆಸ್ಪತ್ರೆ, ಕೊವಿಡ್ ಚಿಕಿತ್ಸಾ ಕೇಂದ್ರ ಮೊದಲಾದವುಗಳು ತೆರೆದಿರಲಿವೆ.
ಈಗಿರುವ ಮಿನಿ ಲಾಕ್ಡೌನ್ನಿಂದಾಗಿ ಯಾವುದೇ ಪ್ರಯೋಜನವಿಲ್ಲ ಎಂದು ತಜ್ಞರು ಹೇಳಿದ್ದಾರೆ. ಮಿನಿ ಲಾಕ್ ಡೌನ್ ಹೇರಿದ್ದರೂ ಜನರು ಮನೆಯಿಂದಾಚೆ ಹೊರಬರುತ್ತಿದ್ದುದರಿಂದ ಕಠಿಣ ಕ್ರಮಗಳೊಂದಿಗೆ ಸಂಪೂರ್ಣಲಾಕ್ ಡೌನ್ ಮಾಡಲು ಸರ್ಕಾರ ತೀರ್ಮಾನಿಸಿದೆ.
ರಾಜ್ಯದ ಸ್ಥಿತಿಗತಿ ಬಗ್ಗೆ ಮುಖ್ಯಮಂತ್ರಿಯವರಿಗೆ ವರದಿ ಹಸ್ತಾಂತರಿಸಿದ ನಂತರ ಸಂಪೂರ್ಣ ಲಾಕ್ಡೌನ್ ನಿರ್ಧಾರ ಕೈಗೊಳ್ಳಲಾಯಿತು. ಮುಂದಿನ ವಾರ ಪ್ರಕರಣಗಳು ಹೆಚ್ಚಾಗಲಿವೆ ಮತ್ತು ಅದು ನಿರ್ಣಾಯಕವಾಗಿದೆ ಎಂದು ತಜ್ಞರ ಸಮಿತಿಯ ವರದಿಯನ್ನು ಸ್ವೀಕರಿಸಿದ ನಂತರ ರಾಜ್ಯವು ಸಂಪೂರ್ಣ ಲಾಕ್ಡೌನ್ಗೆ ನಿರ್ಧಾರ ಕೈಗೊಂಡಿದೆ.
ಪ್ರತಿದಿನ ಕೊವಿಡ್ ಪ್ರಕರಣಗಳು ಅತೀ ಹೆಚ್ಚು ಪತ್ತೆಯಾಗುವ ಮೂರನೇ ರಾಜ್ಯವಾಗಿದೆ. ಕೇರಳ.ಕಳೆದ 24 ಗಂಟೆಗಳಲ್ಲಿ ಇಲ್ಲಿ 41,953 ಮಂದಿಗೆ ಕೊವಿಡ್ ದೃಢಪಟ್ಟಿದೆ. ಪಾಸಿಟಿವಿಟಿ ದರ 25.69 ಆಗಿದೆ.