ಮುಂಬೈ, ಫೆ. 05: ಮಹಾರಾಷ್ಟ್ರದಲ್ಲಿ ಹೆಣ್ಣು ಮಗುವೊಂದು ಕೇವಲ ಐದು ರೂಪಾಯಿಯ ಸಿಹಿತಿಂಡಿಗಾಗಿ ಆಸೆ ಪಟ್ಟಿದ್ದಕ್ಕೆ ಸ್ವಂತ ತಂದೆಯಿಂದಲೇ ಸಾವನ್ನಪ್ಪಿದ ದಾರುಣ ಘಟನೆಯೊಂದು ನಡೆದಿದೆ. ಮುಂಬೈನಿಂದ 900 ಕಿಲೋಮೀಟರ್ ದೂರದಲ್ಲಿರುವ ಲೊನಾರಾ ಎಂಬ ಗ್ರಾಮದ ನಿವಾಸಿಯಾಗಿದ್ದ ಒಂದೂವರೆ ವರ್ಷದ ಪುಟ್ಟ ಮಗು ವೈಷ್ಣವಿ, ಆ ನತದೃಷ್ಟ ಮಗು.
ಫೆಬ್ರವರಿ 2 ರಂದು 28 ವರ್ಷದ ವಿವೇಕ್ ಯೂಕೆ ಕೆಲಸ ಮುಗಿಸಿ ಮನೆಗೆ ಹಿಂತಿರುಗಿ ಬಂದಾಗ ಮಗಳು ವೈಷ್ಣವಿ ಅಳುತ್ತಿದ್ದಳು. ಗೋಧಿಹಿಟ್ಟಿನಿಂದ ಮಾಡುವ ಖಾಜ ಎಂಬ ಸಿಹಿತಿನಿಸಿಗಾಗಿ ಮಗು ಅಳುತ್ತಿದ್ದು, ಖರೀದಿಸುವುದಕ್ಕೆ 5 ರೂಪಾಯಿ ಕೊಡಬೇಕಾಗಿ ಹೆಂಡತಿ ವರ್ಷ ಕೇಳಿದಳು. ಚಿಲ್ಲರೆ ಇಲ್ಲ ಎಂದ ವಿವೇಕ್ ಸಿಟ್ಟಿನಿಂದ ಮಗುವನ್ನು ಎತ್ತಿಕೊಂಡು ಹೋಗಿ ಮಗುವಿನ ತಲೆಯನ್ನು ಬಾಗಿಲಿಗೆ ಮತ್ತು ಮೆಟ್ಟಿಲಿಗೆ ಮತ್ತೆ ಮತ್ತೆ ಕುಟ್ಟಿದ್ದಾನೆ. ಏಟಿನ ರಭಸಕ್ಕೆ ಮಗು ಸ್ಥಳದಲ್ಲೇ ಸಾವಪ್ಪಿದೆ.
‘ದುಡ್ಡು ಕೇಳಿದ್ದಕ್ಕೆ ಕೋಪ ಮಾಡಿಕೊಂಡು, ಮಗುವನ್ನು ಬಾಗಿಲ ಬಳಿ ತೆಗೆದುಕೊಂಡು ಹೋಗಿ ತಲೆಯನ್ನು ಕುಟ್ಟಲಾರಂಭಿಸಿದ. ತಡೆಯಲು ಹೋದ ನನಗೂ ಹೊಡೆದ. ಹೇಗೋ ಮಾಡಿ ಮಗಳನ್ನು ತಿರೋಡಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದೆ. ಆದರೆ ವೈದ್ಯರು ಮಗು ಸತ್ತುಹೋಗಿದೆ ಎಂದು ಹೇಳಿದರು’ ಎಂದು ತಾಯಿ ವರ್ಷ ಪೊಲೀಸರಿಗೆ ದೂರು ನೀಡಿದ್ದಾಳೆ. ತಿರೋಡಾ ಪೊಲೀಸರು ಕೊಲೆಯ ಪ್ರಕರಣ ದಾಖಲಿಸಿ, ವಿವೇಕ್ನನ್ನು ಬಂಧಿಸಿದ್ದಾರೆ.
2018 ರಲ್ಲಿ ವಿವಾಹವಾಗಿದ್ದ ಆತ ಕುಡಿದು ಬಂದು ಹೆಂಡತಿಯನ್ನು ಹೊಡೆಯುತ್ತಿದ್ದ. ಆ ಕಾರಣಕ್ಕಾಗಿ ವರ್ಷ ಸ್ವಲ್ಪ ಕಾಲ ಅವನನ್ನು ಬಿಟ್ಟು ತವರಿಗೆ ಹೋಗಿದ್ದಳು. ಮತ್ತೆ 2019 ರಲ್ಲಿ ವಾಪಸ್ ಬಂದು ಹೇಗೋ ಸಂಸಾರ ನಡೆಸುತ್ತಿದ್ದಳು ಎಂದು ಮಹಾರಾಷ್ಟ್ರದ ಗೊಂಡಿಯಾದ ಠಾಣಾಧಿಕಾರಿ ಯೋಗೇಶ್ ಪರ್ಧಿ ತಿಳಿಸಿದ್ದಾರೆ.