ನವದೆಹಲಿ, ಮೇ. 13: ಭಾರತದಲ್ಲಿ ಕ್ಷಿಪ್ರಗತಿಯಲ್ಲಿ ಹರಡುವ ಮೂಲಕ ಸಾಕಷ್ಟು ಸಾವು ನೋವುಗಳಿಗೆ ಕಾರಣವಾಗಿರುವ ಕೊರೊನಾ ಎರಡನೇ ಅಲೆಯನ್ನು ಹತೋಟಿಗೆ ತರಬೇಕೆಂದರೆ ಇನ್ನೂ ಆರರಿಂದ ಎಂಟು ವಾರಗಳ ಲಾಕ್ಡೌನ್ ಅವಶ್ಯಕ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಮುಖ್ಯಸ್ಥ ಡಾ.ಬಲರಾಮ್ ಭಾರ್ಗವ್ ಅಭಿಪ್ರಾಯಪಟ್ಟಿದ್ದಾರೆ. ರಾಯಿಟರ್ಸ್ ಸುದ್ದಿ ಸಂಸ್ಥೆಗೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಜಿಲ್ಲೆಗಳು ಮುಂದಿನ ಆರರಿಂದ ಎಂಟು ವಾರಗಳ ತನಕ ಲಾಕ್ಡೌನ್ ಆದರೆ ಉತ್ತಮ. ಪರೀಕ್ಷೆಗೆ ಒಳಪಟ್ಟವರ ಪೈಕಿ ಶೇ.10ಕ್ಕಿಂತ ಹೆಚ್ಚು ಮಂದಿಗೆ ಪಾಸಿಟಿವ್ ಕಾಣಿಸಿಕೊಳ್ಳುತ್ತದೆ ಎಂದಾದಲ್ಲಿ ನಿಯಮ ಪಾಲನೆ ಮಾಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಪ್ರಸ್ತುತ ಅನೇಕ ರಾಜ್ಯಗಳು ಕೊರೊನಾ ತಡೆಗಟ್ಟುವಿಕೆಗಾಗಿ ಹಲವು ರೀತಿಯ ಕಠಿಣ ಕ್ರಮಗಳನ್ನು ಜಾರಿಗೆ ತಂದಿದ್ದು, ಸಂದರ್ಭಕ್ಕನುಗುಣವಾಗಿ ಅದನ್ನು ವಿಸ್ತರಿಸಿಕೊಳ್ಳುತ್ತಿವೆ. ಡಾ.ಬಲರಾಮ್ ಭಾರ್ಗವ್ ಅವರ ಪ್ರಕಾರ ಶೇ.10ಕ್ಕಿಂತ ಅಧಿಕ ಪಾಸಿಟಿವ್ ಪ್ರಕರಣಗಳು ಕಾಣಿಸಿಕೊಳ್ಳುವ ಜಿಲ್ಲೆಗಳನ್ನು ಸಂಪೂರ್ಣ ಬಂದ್ ಮಾಡಲೇಬೇಕಿದ್ದು, ಪಾಸಿಟಿವಿಟಿ ಪ್ರಮಾಣವು ಶೇ.5ರಿಂದ 10ರ ನಡುವೆ ಬಂದಾಗ ನಿಯಮಾವಳಿಗಳನ್ನು ಸಡಿಲಿಸಬಹುದು. ಆದರೆ, ಆ ಪ್ರಮಾಣಕ್ಕೆ ಬರಲು ಆರರಿಂದ ಎಂಟು ವಾರಗಳಂತೂ ಬೇಕೇಬೇಕು ಎನ್ನಲಾಗುತ್ತಿದೆ.