ಮೈಸೂರು, ಮಾ. 09: ಸಾಂಸ್ಕೃತಿಕ ನಗರಿ ಮೈಸೂರಲ್ಲಿ ಮಂಗಳವಾರ ಅಪರೂಪದ ಹೆರಿಗೆಯಾಗಿದೆ. ಸಿನಿಮೀಯ ಶೈಲಿಯಲ್ಲಿ ಮಹಾತಾಯಿ ಮಗುವಿಗೆ ಜನ್ಮನೀಡಿದ್ದಾಳೆ. ಪಾರ್ಕ್ ನಲ್ಲೇ ತಾಯಿ ಮಗುವಿಗೆ ಜನ್ಮನೀಡಿದ ಘಟನೆಗೆ ಮೈಸೂರು ಸಾಕ್ಷಿಯಾಗಿದೆ.
ಮೈಸೂರಿನ ಹೃದಯ ಭಾಗದಲ್ಲಿರುವ ಪೀಪಲ್ಸ್ ಪಾರ್ಕ್ನಲ್ಲಿ ಈ ಘಟನೆ ನಡೆದಿದೆ. ಕೊಡಗು ಮೂಲದ ಮಹಿಳೆಯೇ ಪಾರ್ಕ್ ನಲ್ಲಿ ಮಗುವಿಗೆ ಜನ್ಮ ನೀಡಿರುವುದು. ತುಂಬು ಗರ್ಭಿಣಿ ತನ್ನ ಇಬ್ಬರು ಮಕ್ಕಳ ಜೊತೆ ಮೈಸೂರಿಗೆ ಆಗಮಿಸಿದ್ದರು. ಈ ನಡುವೆ ಪಾರ್ಕ್ನಲ್ಲಿ ಕುಳಿತಿದ್ದಾಗ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಮಹಿಳೆ ಕಿರುಚಿದ್ದಾಳೆ.
ಈ ವೇಳೆ ಗರ್ಭಿಣಿ ಸಹಾಯಕ್ಕೆ ದೈಹಿಕ ಶಿಕ್ಷಕಿ ಶೋಭಾ ಎಂಬುವವರು ಧಾವಿಸಿದ್ದಾರೆ. ತುಂಬು ಗರ್ಭಿಣಿಯ ನೋವಿಗೆ ಸ್ಪಂದಿಸಿ ಶಿಕ್ಷಕಿ ನೆರವಿಗೆ ಧಾವಿಸಿದ್ದು, ಒಂದು ಗಂಟೆ ನೋವಿನ ನಂತರ ತಾಯಿ ಮಗುವಿಗೆ ಜನ್ಮ ನೀಡಿದ್ದಾರೆ. ತಕ್ಷಣ ಹೆರಿಗೆ ನೋವು ಕಾಣಿಸಿಕೊಂಡ ಪರಿಣಾಮ ಮಹಿಳೆ ಸಾಕಷ್ಟು ಸುಸ್ತಾಗಿದ್ದಾಳೆ .ದೂರವಾಣಿ ಮೂಲಕ ವೈದ್ಯರ ಸಲಹೆ ಪಡೆದ ಶಿಕ್ಷಕಿ ಶೋಭಾ ಹೆರಿಗೆ ಪ್ರಕ್ರಿಯೆ ಸಹಾಯ ಮಾಡಿದ್ದಾರೆ.
ಇನ್ನು ಮಗು ಮತ್ತು ತಾಯಿಯನ್ನ ಮೈಸೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಒಟ್ನಲ್ಲಿ ಅಪರೂಪದ ಹೆರಿಗೆಗೆ ಇವತ್ತು ಮೈಸೂರು ಸಾಕ್ಷಿಯಾಗಿದೆ . ದೇವರ ದಯೆಯಿಂದ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ . ಸದ್ಯ ಹೆರಿಗೆ ಪ್ರಕ್ರಯೆ ನಡೆದ ವೀಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಶಿಕ್ಷಕಿ ಶೋಭಾ ಅವರ ಧೈರ್ಯಕ್ಕೆ ಎಲ್ಲರು ಶಹಬ್ಬಾಸ್ ಅಂತಿದ್ದಾರೆ .