ಇದು ಬಡ ಕಾರ್ಮಿಕ ಮಹಿಳೆಯರ ಆಕ್ರೋಶ. ಇದು ಅನ್ನಕ್ಕಾಗಿ ಮೂಡಿರೋ ಆಕ್ರೋಶ. ಇದು ಹಸಿವಿನಿಂದ ಕಂಗಾಲಾದ ಜೀವಗಳ ಆಕ್ರೋಶ.
ಹೌದು ಇವರೆಲ್ಲಾ ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಕೃಷಿ ಕಾರ್ಮಿಕ ಮಹಿಳೆಯರು. ಸರ್ಕಾರದ ಕಾರ್ಮಿಕ ಇಲಾಖೆ ಇವರಿಗೆ ಉಚಿತ ಆಹಾರ ಕಿಟ್ ಕೊಡುತ್ತೆ ಹೇಳಿದ್ದಕ್ಕೆ, ಇವರೆಲ್ಲಾ ಮೂರು ದಿನಗಳಿಂದ ಮುಂಜಾನೆಯಿಂದ ಮುಸ್ಸಂಜೆವರೆಗೆ ಇದೇ ರೀತಿ ಈ ಗೋಡೌನ್ ಮುಂದೆ ಕಾದು ವಾಪಾಸ್ಸಾಗುತ್ತಿದ್ದಾರೆ.
ಇಲ್ಲಿ ಸೇರಿರುವ ಹೆಚ್ಚಿನವರು ವಲಸೆ ಕಾರ್ಮಿಕರು. ಕೊರೋನಾ ಇವರನ್ನೆಲ್ಲಾ ಹಸಿವಿನಿಂದ ಕಂಗಾಲಾಗಿಸಿದೆ. ಕೈಯಲ್ಲಿ ದುಡಿಮೆ ಇಲ್ಲ. ತಿನ್ನಲು ಕೂಳೂ ಇಲ್ಲ. ಹಾಗಾಗಿ ಇವರು ಸರ್ಕಾರದ ನೆರವಿಗೆ ಅಂಗಲಾಚುತ್ತಿದ್ದಾರೆ. ಆದ್ರೆ ಸರ್ಕಾರಿ ಅಧಿಕಾರಿಗಳು ಮಾತ್ರ ಇವರ ಹಸಿವನ್ನು ಅಪಹಾಸ್ಯ ಮಾಡುತ್ತಿದೆ. ದಿನಗಟ್ಟಲೆ ಕಾಯಿಸಿ ಬರಿಗೈಯಲ್ಲಿ ವಾಪಾಸ್ ಕಳುಹಿಸುತ್ತಿದೆ.
ಮಾಸ್ಕ್ ಇಲ್ಲದೆ, ಸಾಮಾಜಿಕ ಅಂತರ ಇಲ್ಲದೆ ಇವರು ಅನ್ನಕ್ಕಾಗಿ ಈ ರೀತಿ ಗಂಟೆಗಟ್ಟಲೆ ಕ್ಯೂ ನಿಂತ್ರೂ ಏನೂ ಪ್ರಯೋಜನವಾಗಿಲ್ಲ. ಕೊನೆಗೆ ಯಾರೋ ಏಜೆಂಟರು ಬಂದು ಹತ್ತು ಹತ್ತು ರೂಪಾಯಿ ಸಂಗ್ರಹಿಸಿ, ಒಂದು ಅರ್ಜಿ ಕೊಟ್ಟು ಹೆಸರು ಬರೆಸಿಕೊಂಡು ಕೈತೊಳೆದುಕೊಂಡಿದ್ದಾರೆ.
ಆ ಏಜೆಂಟ್ ಯಾರು? ಈತನೂ ಕೂಡ ಹತ್ತು ರೂಪಾಯಿ ಸಂಗ್ರಹಿಸಿ ಈ ಬಡವರ ಹಸಿವಿನ ಬೇಗೆಯಲ್ಲಿ ಬೇಳೆ ಬೇಯಿಸಿಕೊಳ್ಳುತ್ತಿದ್ದಾನಾ? ಗೊತ್ತಿಲ್ಲ.
ಈ ಬಗ್ಗೆ ಕಾರ್ಮಿಕ ಇಲಾಖೆ ಅಧಿಕಾರಿಯವರ ಬಗ್ಗೆ ವಿಚಾರಿಸಿದ್ರೆ ಅವರು ತಲೆ ಎತ್ತಿಯೂ ಉತ್ತರ ಕೊಡ್ತಿಲ್ಲ. ಕೈತುಂಬಾ ಸಂಬಳ ಪಡೆಯೋ ಈ ಸರ್ಕಾರಿ ಅಧಿಕಾರಿಗಳಿಗೆ ಬಡವನ ಹಸಿವಿನ ನೋವು ಹೇಗೆ ಗೊತ್ತಾಗಬೇಕು ಹೇಳಿ.
ಭಾಲ್ಕಿಯಿಂದ ಪವನ್ ಸಿಟಿಜನ್ ಜರ್ನಲಿಸ್ಟ್, ವಿಜಯಟೈಮ್ಸ್