ವಿದ್ಯಾರ್ಥಿಗಳು ಅಥವಾ ಯಾವುದಾದರೂ ಮುಖ್ಯವಾದ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುತ್ತಿರುವವರು, ರಾತ್ರಿಯಲ್ಲಿ ಹೆಚ್ಚು ಗಂಟೆಗಳ ಕಾಲ ಅಧ್ಯಯನ ಮಾಡಬೇಕಾದಾಗ ದೊಡ್ಡ ಅಡಚಣೆಯಾಗಿ ಕಾಡುವುದು ನಿದ್ರೆ. ಆ ಕ್ಷಣಕ್ಕೆ ನಿದ್ರೆ ಎನ್ನುವುದು, ನಿಮ್ಮ ಗುರಿಯನ್ನು ತಲುಪಲು ಬಿಡದೇ ಕಾಲೆಳೆಯುವ ಶತ್ರುವಿನಂತೆ ಭಾಸವಾಗುತ್ತದೆ.
ನೀವು ಬೆಳಗ್ಗೆ ತಾಜಾ ಮನಸ್ಸಿನಿಂದ ಅಧ್ಯಯನ ಮಾಡುವಾಗ, ವಿಷಯಗಳನ್ನು ಕಲಿಯುವುದು ತುಂಬಾ ಸುಲಭ, ಆದರೆ ಮಧ್ಯಾಹ್ನ ಮತ್ತು ತಡರಾತ್ರಿಯಂತಹ ಕೆಲವು ಅವಧಿಗಳಲ್ಲಿ, ನಿಮ್ಮ ಅಧ್ಯಯನದ ಸಮಯವನ್ನು ವಿಸ್ತರಿಸಲು ನೀವು ಪ್ರಯತ್ನಿಸಿದಾಗ ನಿದ್ರೆ ಅನಿವಾರ್ಯವಾಗುತ್ತದೆ.

ಅಂತಹ ಸಮಯದಲ್ಲಿ, ನಿಮಗಿರುವ ಆಯ್ಕೆಗಳು ಎರಡೇ. ಮೊದಲನೆಯದು ಪುಸ್ತಕಗಳನ್ನು ಪಕ್ಕಕ್ಕಿಟ್ಟು ಮಲಗುವುದು ಮತ್ತು ಎರಡನೆಯದು ಅರೆನಿದ್ರಾವಸ್ಥೆಯ ವಿರುದ್ಧ ಹೋರಾಡುವುದು. ಹಾಗಾಗಿ, ದೀರ್ಘ ಗಂಟೆಗಳ ಕಾಲ ಅಧ್ಯಯನ ಮಾಡುವಾಗ ನಿದ್ರೆಯನ್ನು ತಪ್ಪಿಸಲು ಕೆಲವು ಉಪಯುಕ್ತ ಮತ್ತು ಲಾಭದಾಯಕ ಸಲಹೆಗಳನ್ನು ಅನುಸರಿಸಬಹುದು. ಮೊದಲನೆಯದಾಗಿ, ನಿಮ್ಮ ಅಧ್ಯಯನ ಕೊಠಡಿಯಲ್ಲಿ ಬೆಳಕು ಚೆನ್ನಾಗಿರಲಿ. ಹೆಚ್ಚಿನ ವಿದ್ಯಾರ್ಥಿಗಳು ಮಾಡುವ ದೊಡ್ಡ ತಪ್ಪು, ಇಡೀ ಕೋಣೆಯ ದೀಪವನ್ನು ಆರಿಸಿ, ಮೇಜಿನ ದೀಪವನ್ನು ಬೆಳಗಿಸಿ ಅಧ್ಯಯನ ಮಾಡುವುದು.
ಇದರಿಂದಾಗಿ ಕೋಣೆಯ ಹೆಚ್ಚಿನ ಭಾಗವು ಕತ್ತಲೆಯಲ್ಲಿ ಉಳಿಯುತ್ತದೆ, ಇದು ಅಂತಿಮವಾಗಿ ನಿಮ್ಮನ್ನು ನಿದ್ರೆ ಮಾಡಲು ಪ್ರಚೋದಿಸುತ್ತದೆ. ಅಂತಹ ಆರಾಮದಾಯಕ ಪರಿಸ್ಥಿತಿಯನ್ನು ತಪ್ಪಿಸಲು, ನಿಮ್ಮ ಕೋಣೆಯಲ್ಲಿ ಲೈಟ್‌ಗಳು ಆನ್ ಆಗಿರಲಿ. ಕುರ್ಚಿಯಲ್ಲಿ ಕುಳಿತುಕೊಳ್ಳಿ, ಹಾಸಿಗೆಯ ಮೇಲೆ ಅಲ್ಲ. ದೀರ್ಘ ಗಂಟೆಗಳ ಕಾಲ ಅಧ್ಯಯನ ಮಾಡುವಾಗ ನಿಮ್ಮ ಕುಳಿತುಕೊಳ್ಳುವ ಸ್ಥಾನವು ತುಂಬಾ ಮುಖ್ಯವಾಗಿರುತ್ತದೆ. ಹಿಂಭಾಗದ ಬೆಂಬಲ ಮತ್ತು ಮುಂದೆ ಮೇಜಿನೊಂದಿಗೆ ಕುರ್ಚಿಯಲ್ಲಿ ಕುಳಿತುಕೊಳ್ಳಲು ಪ್ರಯತ್ನಿಸಿ. ಇದು ಅಧ್ಯಯನ ಮಾಡುವಾಗ ನೀವು ಸಕ್ರಿಯವಾಗಿ ಮತ್ತು ಎಚ್ಚರವಾಗಿರಲು ಸಹಾಯ ಮಾಡುತ್ತದೆ.

ಭಾರೀ ಊಟವನ್ನು ತಪ್ಪಿಸಿ. ಇದರ ಅರ್ಥ, ಆಲಸ್ಯವನ್ನು ತಪ್ಪಿಸಲು ನೀವು ಹಸಿವಿನಿಂದ ಇರಬೇಕಾಗುತ್ತದೆ ಎಂದಲ್ಲ. ಬದಲಾಗಿ, ನೀವು ಬೇಗನೆ ನಿಮ್ಮ ಊಟವನ್ನು ತೆಗೆದುಕೊಳ್ಳಬೇಕು ಮತ್ತು ಸಣ್ಣ ಮಟ್ಟದಲ್ಲಿ ಊಟ ಮಾಡಬೇಕು. ಬೇಗ ಮಲಗಲು ಮತ್ತು ಬೇಗ ಏಳಲು ಅಲರಾಂ ಅನುಸರಿಸಿ. “ಬೇಗ ಮಲಗುವುದು, ಬೇಗ ಏಳುವುದು ಮನುಷ್ಯನನ್ನು ಆರೋಗ್ಯವಂತ, ಶ್ರೀಮಂತ ಮತ್ತು ಬುದ್ಧಿವಂತನನ್ನಾಗಿ ಮಾಡುತ್ತದೆ” ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಈ ವಿಧಾನವನ್ನು ಅನುಸರಿಸುವ ಮೂಲಕ ನೀವು ಸರಿಯಾಗಿ ಅಧ್ಯಯನ ಮಾಡಬಹುದು.
ಆದರೆ, ಹಳೆಯ ಕಾಲದಲ್ಲಿ ಓದುವಾಗ ನಿದ್ರೆ ಬರಬಾರದು ಎಂದು ಯಾವ ವಿಧಾನಗಳನ್ನು ಅನುಸರಿಸುತ್ತಿದ್ದರು ಎಂಬುದರ ಬಗ್ಗೆ ತಿಳಿದಿದೆಯಾ?
1948ರ ಸಮಯದ ಒಂದು ಫೋಟೋದಲ್ಲಿರುವ ದೃಶ್ಯದ ಪ್ರಕಾರ, ಆ ಕಾಲದ ವಿದ್ಯಾರ್ಥಿಯೊಬ್ಬ ಓದುವ ಸಮಯದಲ್ಲಿ ನಿದ್ರೆಗೆ ಜಾರಬಾರದು ಎಂಬ ಉದ್ದೇಶದಿಂದ ತನ್ನ ಉದ್ದ ಕೂದಲಿಗೆ ಹಗ್ಗ ಕಟ್ಟಿ ಗೋಡೆಯಲ್ಲಿನ ಮೊಳೆಗೆ ಸಿಕ್ಕಿಸುವ ಮೂಲಕ, ನಿದ್ರೆ ಬಂದು ತೂಕಡಿಸಿದರೂ ಎಚ್ಚರವಾಗುವಂತೆ ವ್ಯವಸ್ಥೆ ಮಾಡಿರುವ ಫೋಟೋ ಒಂದು ಬಹಳ ವಿಭಿನ್ನವಾಗಿದೆ. ಈ ವಿಧಾನ ನಿಜಕ್ಕೂ ಬಹಳ ಅಚ್ಚರಿಯಾಗುವಂತಿದೆ.
- ಪವಿತ್ರ