ಮೈಸೂರು, ಜೂ. 11: ಮಹಿಳೆಯೊಬ್ಬರು ಹಣಕ್ಕಾಗಿ ಮೂರು ದಿನದ ಮಗುವನ್ನು ಮಾರಾಟ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.
ಬೆಂಗಳೂರಿನಿಂದ ಹೆಚ್.ಡಿ. ಕೋಟೆ ತಾಲೂಕಿನ ಟೈಗರ್ ಬ್ಲಾಕ್ ಗೆ ಗಂಡು ಮಗು ಮಾರಾಟವಾಗಿದ್ದು, ಮೊಬೈಲ್ ನಲ್ಲೇ ವ್ಯವಹರಿಸಿ ಗಂಡು ಮಗು ಮಾರಾಟ ಮಾಡಲಾಗಿದೆ.
ಟೈಗರ್ ಬ್ಲಾಕ್ ನ ಅಂಬರೀಶ್ ಮತ್ತು ಮಧುಮಾಲತಿ ಅವರಿಗೆ ಮದುವೆಯಾಗಿ ೧೫ ವರ್ಷ ಕಳೆದರೂ ಮಕ್ಕಳಿರಲಿಲ್ಲ. ಮಕ್ಕಳಿಗಾಗಿ ಹಂಬಲಿಸುತ್ತಿದ್ದ ದಂಪತಿಗೆ ಪರಿಚಿತರೊಬ್ಬರ ಮಾರ್ಗದರ್ಶನದಲ್ಲಿ ಮಗು ದೊರೆತಿದೆ. ಬೆಂಗಳೂರಿನ ರೋಜಾ ಎಂಬವರೇ ಮಗು ಮಾರಾಟ ಮಾಡಿದ ಮಹಿಳೆಯಾಗಿದ್ದು, ಅಂಬರೀಷ್ ಮತ್ತು ಮಧುಮಾಲತಿ ದಂಪತಿ 1.5ಲಕ್ಷ ಹಣಕ್ಕೆ ಮಗುವನ್ನು ಖರೀದಿಸಿದ್ದರು.
ಟೈಗರ್ ಬ್ಲಾಕ್ ನ ಹಕ್ಕಿಪಿಕ್ಕಿ ಜನಾಂಗದ ದಂಪತಿ ಮಗು ಖರೀದಿಸಿದ 7 ತಿಂಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಹಕ್ಕಿಪಿಕ್ಕಿ ಸಮುದಾಯದ ಅಂಬರೀಷ್ ಮತ್ತು ಮಧುಮಾಲತಿ ದಂಪತಿ ತಲೆಕೂದಲು ಬೆಳೆಯುವ ತೈಲ ಮಾರುವಾಗ ಆನ್ ಲೈನ್ ನಲ್ಲಿ ಪರಿಚಯವಾದ ರೋಜಾ, ನನಗೆ ಹೆಣ್ಣು ಮಗು ಬೇಕಿತ್ತು ಗಂಡು ಮಗು ಬೇಡ ಎಂದು ಮಾರಾಟ ಮಾಡಿದ್ದರು ಎಂದು ಹೇಳಲಾಗಿದೆ.
ಮಗು ಮಾರಾಟ ಮಾಡುವಾಗ ಮೊಬೈಲ್ ಕರೆಯಲ್ಲಿ ಚೌಕಾಸಿ ನಡೆಸಿ ಅಂತಿಮವಾಗಿ 1.5 ಲಕ್ಷಕ್ಕೆ ಮಗು ಮಾರಾಟವಾಗಿತ್ತು ಎಂದು ದಂಪತಿ ತಿಳಿಸಿದ್ದಾರೆ.
ಮಗು ಮಾರಾಟ ಮಾಡಿದ ಏಳು ತಿಂಗಳ ಬಳಿಕ ಮಗು ವಾಪಸ್ ನೀಡುವಂತೆ ರೋಜಾ ಒತ್ತಾಯಿಸಿದ್ದಾರಲ್ಲದೆ, ಬೆಂಗಳೂರಿನಿಂದ ಟೈಗರ್ ಬ್ಲಾಕ್ ಗೆ ಬಂದು ಮಧು ಮಾಲತಿ ಜೊತೆ ಮಗುಗಾಗಿ ರಂಪಾಟ ನಡೆಸಿದ್ದಾರೆ.
ರಂಪಾಟ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಮಾರಾಟವಾದ ಮಗು ಅಪಹರಣ ಆಗಿತ್ತ ಎನ್ನುವ ಅನುಮಾನದ ಮಾತುಗಳು ಕೇಳಿಬರುತ್ತಿವೆ. ಈ ಕುರಿತು ಹೆಚ್.ಡಿ.ಕೋಟೆ ಪೊಲೀಸ್ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.