ನವದೆಹಲಿ : ನರೇಂದ್ರ ಮೋದಿ(Narendra Modi) ನೇತೃತ್ವದ ಕೇಂದ್ರ ಸರ್ಕಾರವನ್ನು, ಆಮ್ ಆದ್ಮಿ ಪಕ್ಷವು(AAP) ತರಾಟೆಗೆ ತೆಗೆದುಕೊಂಡಿದ್ದು, ದೆಹಲಿ ಸರ್ಕಾರವನ್ನು ಕುತಂತ್ರದಿಂದ ಬೀಳಿಸಲು ಬಿಜೆಪಿ(BJP) ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದೆ.

ಬಿಜೆಪಿ ಕೇಂದ್ರ ತನಿಖಾ ಸಂಸ್ಥೆಗಳನ್ನು ತನ್ನ ನಾಯಕರ ವಿರುದ್ಧ ಬಳಸಿಕೊಳ್ಳುತ್ತಿದೆ ಎಂದು ಎಎಪಿ ಆರೋಪಿಸಿದ್ದು, ಎಎಪಿ ಶಾಸಕರಿಗೆ ನಗದು ಮತ್ತು ಬೆದರಿಕೆಯ ಆಮಿಷ ಒಡ್ಡಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ಹಿರಿಯ ನಾಯಕರು ಪತ್ರಿಕಾಗೋಷ್ಠಿ ನಡೆಸಿ ಆರೋಪಿಸಿದ್ದಾರೆ.
ಇದನ್ನೂ ಓದಿ : https://vijayatimes.com/rules-circular-from-state-government/
ಇನ್ನು ಎಎಪಿಯ ಆರೋಪವನ್ನು ಬಿಜೆಪಿಯು ನಿರಾಕರಿಸಿದೆ. ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ(Manish Sisodia) ಮೇಲೆ ಕೇಂದ್ರೀಯ ತನಿಖಾ ದಳ (ಸಿಬಿಐ) ದಾಳಿ ನಡೆಸಿದ ನಂತರ ಆರೋಪವನ್ನು ಎದುರಿಸಲಾಗದೇ, ಈ ರೀತಿಯ ವಿರುದ್ದ ಆರೋಪಗಳನ್ನು ಮಾಡಲು ಎಎಪಿ ಪ್ರಯತ್ನಿಸುತ್ತಿದೆ ಎಂದು ವಾಗ್ದಾಳಿ ನಡೆಸಿದೆ.

ಇನ್ನೊಂದೆಡೆ ಎಎಪಿಯ ರಾಷ್ಟ್ರೀಯ ವಕ್ತಾರ ಮತ್ತು ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರು ದೆಹಲಿ ಸರ್ಕಾರವನ್ನು ಉರುಳಿಸಲು ಕೇಂದ್ರ ಏಜೆನ್ಸಿಗಳನ್ನು ಬಿಜೆಪಿ ಹೇಗೆ ಬಳಸಿಕೊಳ್ಳುತ್ತಿದೆ ಎಂಬುದನ್ನು ಬಹಿರಂಗಪಡಿಸುತ್ತೇನೆ. ದಿಲ್ಲಿಯ ಶಾಸಕರನ್ನು ಒಡೆಯುವ ಪ್ರಯತ್ನಗಳು ಪ್ರಾರಂಭವಾಗಿವೆ.
20 ಕೋಟಿಯ ಆಫರ್ ತೆಗೆದುಕೊಳ್ಳಿ ಅಥವಾ ಮನೀಶ ಸಿಸೋಡಿಯಾ ಅವರಂತೆ ಸಿಬಿಐ ಪ್ರಕರಣಗಳನ್ನು ಎದುರಿಸಿ ಎಂದು ಬಿಜೆಪಿ ಸದಸ್ಯರು ಎಎಪಿ ಶಾಸಕರಿಗೆ ಬೆದರಿಕೆ ಹಾಕುತ್ತಿದ್ದಾರೆ. ಇದಕ್ಕಾಗಿ ಎಎಪಿ ಶಾಸಕರಾದ ಅಜಯ್ ದತ್, ಸಂಜೀವ್ ಝಾ, ಸೋಮನಾಥ್ ಭಾರತಿ ಮತ್ತು ಕುಲದೀಪ್ ಕುಮಾರ್ ಅವರನ್ನು ಭಾರತೀಯ ಜನತಾ ಪಕ್ಷದ ನಾಯಕರು ಸಂಪರ್ಕಿಸಿದ್ದಾರೆ ಎಂದು ಸಿಂಗ್ ಆರೋಪಿಸಿದ್ದಾರೆ.
ಇನ್ನು ಪ್ರಧಾನಿ ಮೋದಿಗೆ ಸವಾಲೆಸೆದ ಸಂಜಯ್ ಸಿಂಗ್, “ನೀವು ಅನೇಕ ರಾಜ್ಯಗಳಲ್ಲಿ ಸರ್ಕಾರಗಳನ್ನು ಬೆದರಿಸಿ ಬೀಳಿಸಿದ್ದೀರಿ, ಆದರೆ ಇದು ದೆಹಲಿ, ಇಲ್ಲಿಯ ಜನರು ಕೇಜ್ರಿವಾಲ್ ಅವರನ್ನು ಮೂರು ಬಾರಿ ಆಯ್ಕೆ ಮಾಡಿದ್ದಾರೆ ಎಂಬುದನ್ನು ಮರೆಯಬೇಡಿ” ಎಂದಿದ್ದಾರೆ.