ಬೆಂಗಳೂರು ಸೆ 9 : ಕಾರ್ಮಿಕ ಇಲಾಖೆ ಕೇಂದ್ರ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದು, ದಾಳಿ ವೇಳೆ ದಾಖಲೆ ಇಲ್ಲದ ರೂ.1.54 ಲಕ್ಷ ನಗದು ವಶಕ್ಕೆ ಪಡೆದುಕೊಂಡಿದ್ದಾರೆಂದು ತಿಳಿದುಬಂದಿದೆ. ಇಲಾಖೆ ಅಧಿಕಾರಿಗಳಿಂದ ಮಾಮೂಲು ಸಂಗ್ರಹ ಆರೋಪ ಕೇಳಿ ಬಂದ ಹಿನ್ನಲೆ 10 ಮಂದಿ ಅಧಿಕಾರಿಗಳ ತಂಡದಿಂದ ದಾಳಿ ನಡೆಸಿ ದಾಖಲೆಗಳನ್ನು ಪರೀಶಿಲಿಸಲಾಗಿದೆ
ಕಾರ್ಮಿಕ ಇಲಾಖೆ ಅಡಿ ಬರುವ ಏಜೆನ್ಸಿಗಳಿಂದ ಮಾಮೂಲಿ ಸಂಗ್ರಹ ಆರೋಪ ಕೇಳಿಬಂದಿತ್ತು ಎನ್ನಲಾಗಿದೆ. ಈ ಹಿನ್ನೆಲೆ ಬೆಂಗಳೂರಿನ ಡೈರಿ ಸರ್ಕಲ್ ನಲ್ಲಿ ಇರುವ ಕಾರ್ಮಿಕ ಇಲಾಖೆ ಕಚೇರಿಯಲ್ಲಿ ಸಂಜೆ ವೇಳೆಗೆ ಹಣ ಸಂಗ್ರಹ ಮಾಹಿತಿ ಆಧರಿಸಿ ದಾಳಿ ನಡೆಸಿದ ಎಸಿಬಿ ದಾಳಿ ನಡೆಸಿದೆ.
ದಾಳಿ ವೇಳೆ ಸೀನಿಯರ್ ಲೇಬರ್ ಇನ್ಸ್ ಪೆಕ್ಟರ್ ಗಳ ಬಳಿ ಕಂತೆ-ಕಂತೆ ಹಣ ಪತ್ತೆಯಾಗಿದೆ. ಗಾರ್ಮೆಂಟ್ಸ್, ಸೆಕ್ಯುರಿಟಿ ಏಜನ್ಸಿ ಸೇರಿದಂತೆ ಸಾಕಷ್ಟು ಸಂಸ್ಥೆಗಳಿಂದ ಹಣ ವಸೂಲಿ ಮಾಡುತ್ತಿದ್ದರು ಎಂಬ ಆರೋಪ ಕೂಡ ಕೇಳಿ ಬರುತ್ತಿದೆ. ಇಲಾಖೆ ಕಾರ್ಮಿಕರ ಪಿಎಫ್, ಗ್ರ್ಯಾಚ್ಯುವಿಟಿ ಸೇರಿದಂತೆ ನಾನಾ ಸೌಲಭ್ಯಗಳ ಬಗ್ಗೆ ಪರಿಶೀಲನೆ ಮಾಡಬೇಕು. ಆದರೆ ಇವರು ಕಾರ್ಮಿಕ ಇಲಾಖೆಯ ಸಿಬ್ಬಂದಿ ವ್ಯವಸ್ಥೆಯಲ್ಲಿ ಲೋಪ ಕಂಡು ಬಂದರೂ ಕ್ರಮ ಜರುಗಿಸದೆ ಅಕ್ರಮ ಹಣಕ್ಕಾಗಿ ಡಿಮ್ಯಾಂಡ್ ಮಾಡುತ್ತಿದ್ದರು ಎಂಬ ಆರೋಪ ಮಾಡಲಾಗಿದೆ. ಎಸಿಬಿ ಡಿವೈಎಸ್ ಪಿ ಪ್ರತಾಪ್ ರೆಡ್ಡಿ ನೇತೃತ್ವದಲ್ಲಿ ಈ ದಾಳಿ ಆಗಿದ್ದು, ಪ್ರಕರಣದ ಕುರಿತು ತನಿಖೆ ಮುಂದುವರೆಸಿದ್ದಾರೆ