ಕೊಡಗು, ಏ. 15: ಟೈಯರ್ ತುಂಬಿದ್ದ ಲಾರಿ ಹಾಗೂ ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಎರಡೂ ವಾಹನಗಳು ಸುಟ್ಟು ಭಸ್ಮವಾಗಿರುವ ಘಟನೆ ಮಡಿಕೇರಿ ಸಮೀಪದ ಕೆದಕಲ್ ಬಳಿ ಸಂಭವಿಸಿದೆ.
ಮೈಸೂರು ಮಡಿಕೇರಿ ಹೆದ್ದಾರಿಯ ಸೂಂಟಿಕೊಪ್ಪ ಸಮೀಪದ ಕೆದಕಲ್ ಸಮೀಪ ಬುಧವಾರ ರಾತ್ರಿ ಈ ಅಪಘಾತ ಸಂಭವಿಸಿದ್ದು, ಮೈಸೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಲಾರಿ, ಮಡಿಕೇರಿಯಿಂದ ಮೈಸೂರಿಗೆ ತೆರಳುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಎರಡು ವಾಹನಗಳಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಅಲ್ಲದೇ ಲಾರಿಯಲ್ಲಿ ಟೈಯರ್ ತುಂಬಿದ್ದರಿಂದಾಗಿ ಬೆಂಕಿಯ ಜ್ವಾಲೆ ಕ್ಷಣದಲ್ಲೇ ಉಲ್ಬಣಿಸಿದ್ದು, ಎರಡು ವಾಹನಗಳು ಸುಟ್ಟು ಕರಕಲಾಗಿವೆ.
ಅಪಘಾತಕ್ಕೀಡಾದ ಲಾರಿ ಹಾಗೂ ಕಾರಿನ ಚಾಲಕರು ಪ್ರಣಾಪಾಯದಿಂದ ಪಾರಾಗಿದ್ದಾರೆ. ಅಲ್ಲದೇ ಎರಡು ವಾಹನಗಳಲ್ಲಿ ಚಾಲಕರನ್ನು ಹೊರತುಪಡಿಸಿ ಬೇರೆ ಯಾರು ಇಲ್ಲದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ. ಈ ನಡುವೆ ಘಟನೆಯಿಂದಾಗಿ ತಡರಾತ್ರಿ 2 ಘಂಟೆಯವರೆಗೂ ಮಡಿಕೇರಿ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು.
ಈ ವೇಳೆ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಸಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಬಳಿಕ ಪೋಲೀಸರು ಜೆಸಿಬಿ ಹಾಗೂ ಕ್ರೇನ್ ಬಳಸಿ ಅಪಘಾತಕ್ಕೀಡಾದ ಎರಡು ವಾಹನಗಳನ್ನು ರಸ್ತೆಬದಿಗೆ ಸರಿಸಿ, ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಈ ಸಂಬಂಧ ಸುಂಟಿಕೊಪ್ಪ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.