ಬೆಂಗಳೂರಿನ(Bengaluru) ಕಾಮಾಕ್ಷಿಪಾಳ್ಯ(KamakshiPalya) ಪೊಲೀಸ್ ಠಾಣಾ ವ್ಯಾಪ್ತಿಗೆ ಬಂದಿದ್ದ ಆಸಿಡ್ ದಾಳಿ ಪ್ರಕರಣದ ಆರೋಪಿ ನಾಗೇಶ್ನನ್ನು ಬಂಧಿಸಲಾಗಿದೆ.

ಹೌದು, ಕಳೆದ ಎರಡು ವಾರಗಳ ಹಿಂದೆ ಸುಂಕದಕಟ್ಟೆಯಲ್ಲಿ(Sunkadakatte) ಹಾಡುಹಗಲೇ ಯುವತಿ ಮೇಲೆ ಆಸಿಡ್ ಎರಚಿ ಆಕೆಯನ್ನು ಹಿಂಸಿಸಿದ್ದ ಆರೋಪಿ ನಾಗೇಶ್ ಘಟನೆ ನಂತರ ಸ್ಥಳದಿಂದ ಪರಾರಿಯಾಗಿದ್ದ. ಈ ಕಿಡಿಗೇಡಿಯನ್ನು ಸೆರೆ ಹಿಡಿಯಲು ರೂಪಿಸಿದ್ದ ತಂಡ ಬಹಳ ದಿನಗಳಿಂದ ಹರಸಾಹಸ ಪಡುತ್ತಿತ್ತು. ಆದ್ರೆ, ಇಂದು ತಮಿಳುನಾಡಿನಲ್ಲಿ ಸ್ವಾಮೀಜಿ ವೇಷಧಾರಿಯಾಗಿ ತಲೆಮರಿಸಿಕೊಂಡಿದ್ದ ನಾಗೇಶ್ನನ್ನು ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ.
ತನ್ನ ಪ್ರೀತಿಯನ್ನು ನಿರಾಕರಿಸಿದಳು ಎಂಬ ಒಂದೇ ಕಾರಣಕ್ಕೆ, ಆ ಹುಡುಗಿಯ ಜೀವನವನ್ನೇ ಆಸಿಡ್ ಎರಚುವ ಮೂಲಕ ನಾಶ ಮಾಡಿದ ಕ್ರೂರಿ ವಿರುದ್ಧ ಯುವತಿಯ ಪೋಷಕರು ಹಿಡಿ ಶಾಪ ಹಾಕುತ್ತಿದ್ದರು, ಸದ್ಯ 20 ದಿನಗಳಿಂದ ಪೊಲೀಸರ ಕಣ್ಣಿನಿಂದ ತಪ್ಪಿಸಿಕೊಂಡಿದ್ದ ನಾಗೇಶ್ನನ್ನು ಕೊನೆಗೂ ಪೊಲೀಸರು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿರುವುದು ನಿಟ್ಟುಸಿರು ಬಿಡುವಂತವಾಗಿದೆ.

ಆರೋಪಿಯನ್ನು ಪೊಲೀಸರು ಬಂಧಿಸಿದ್ದರು, ಯುವತಿಗೆ ಮೊದಲನೆ ಹಂತದ ನ್ಯಾಯ ಒದಗಿಸಿಕೊಟ್ಟರು ಕೂಡ ಯುವತಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿರುವ ದೃಶ್ಯ ಕುಟುಂಬಸ್ಥರನ್ನು ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದೆ.