ಸಾಮಾಜಿಕ ಹೋರಾಟಗಾರ(Social Activist) ಮತ್ತು ನಟ ಚೇತನ್(Actor Chethan) ಇದೀಗ ಅಚ್ಚರಿ ಹೇಳಿಕೆಯೊಂದನ್ನು ನೀಡಿದ್ದಾರೆ. ಪಠ್ಯಪುಸ್ತಕ ಪರಿಷ್ಕರಣೆ ಕುರಿತು ಬಿಜೆಪಿ ಸರ್ಕಾರದ(BJP Govt) ವಿರುದ್ದ ತೀವ್ರ ವಾಗ್ದಾಳಿ ನಡೆಸುತ್ತಿದ್ದ ಚೇತನ್ ಇದೀಗ ಪಠ್ಯಪರಿಷ್ಕರಣ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ(Rohith Chakratheertha) ಪರ ಬ್ಯಾಟ್ ಮಾಡಿದ್ದಾರೆ.
ರೋಹಿತ್ ಚಕ್ರತೀರ್ಥ ರಾಷ್ಟ್ರಕವಿ ಕುವೆಂಪು(RashtraKavi Kuvempu) ಅವರು ರಚಿಸಿರುವ ನಾಡಗೀತೆಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಸೇರಿದಂತೆ ರಾಜ್ಯದ ಪ್ರಗತಿಪರರು, ಸಾಹಿತಿಗಳು ರೋಹಿತ್ ಚಕ್ರತೀರ್ಥ ಬಂಧನಕ್ಕೆ ಆಗ್ರಹಿಸಿದ್ದರು. ಇದೀಗ ಈ ಕುರಿತು ನಟ ಚೇತನ್ “ಇವತ್ತಿನ ಪಠ್ಯಪುಸ್ತಕ ಪ್ರತಿಭಟನೆ ಸಮಾನತೆ ಮತ್ತು ನ್ಯಾಯಪರ ಹೋರಾಟ ಅಲ್ಲ- ಇದು ಕಾಂಗ್ರೆಸ್(Congress) ಮತ್ತು ಬ್ರಾಹ್ಮಣ್ಯದ ಸವಲತ್ತುಗಳನ್ನು ಉಳಿಸಿಕೊಳ್ಳುವ ಹೋರಾಟ.
ಕಾಂಗ್ರೆಸ್ ಬೆಂಬಲಿತ ಪಠ್ಯಪುಸ್ತಕಗಳೂ ಬಿಜೆಪಿ ಬೆಂಬಲಿತ ಪ್ರಸ್ತುತ ಪಠ್ಯಪುಸ್ತಕಗಳೂ ಎರಡರಲ್ಲೂ ನಿಜವಾದ ಸಮಾನತಾವಾದಕ್ಕೆ (ಅಂಬೇಡ್ಕರ್-ಪೆರಿಯಾರ್ವಾದ) ನ್ಯಾಯ ಒದಗಿಸಿಲ್ಲ. ಇನ್ನು ಸಿದ್ಧರಾಮಯ್ಯನವರು ಚಕ್ರತೀರ್ಥನ ಬಂಧನಕ್ಕೆ ಆಗ್ರಹ ನೀಡಿದ್ದಾರೆ. ಇದು ವಾಕ್ ಸ್ವಾತಂತ್ರ್ಯದ ವಿರೋಧಿಯಾಗಿದ್ದು, ಅಸಂವಿಧಾನಿಕವಾಗಿದೆ. ಸಿದ್ದರಾಮಯ್ಯನವರು ರಾಜಕೀಯ ಲಾಭಕ್ಕಾಗಿ ಪ್ರಜಾಪ್ರಭುತ್ವವನ್ನು ನಾಶಮಾಡುವ ಮೂಲಕ ಕಾಂಗ್ರೆಸ್ ಪಕ್ಷವು ಎಂದಿನಂತೆ ಅಪಮಾನಿಸುವುದನ್ನು ಮುಂದುವರೆಸಿದೆ.
ಗಾಂಧಿ (ಬೋಸ್ ಚುನಾವಣೆ 39) , ಇಂದಿರಾ ಗಾಂಧಿ (ತುರ್ತು ಪರಿಸ್ಥಿತಿ ’75+), ನರಸಿಂಹ ರಾವ್ (ಕುದುರೆ ವ್ಯಾಪಾರ ’91+) ಬಿಜೆಪಿಗಿಂತ ಕಾಂಗ್ರೆಸ್ ಪಕ್ಷವು ನಿಜವಾಗಿಯೂ ಪ್ರಜಾ ಪ್ರಭುತ್ವವಾಗಿದೆಯೇ? ಎಂದು ಪ್ರಶ್ನಿಸಿದ್ದಾರೆ. ಇನ್ನು ಕರ್ನಾಟಕ ಕಾಂಗ್ರೆಸ್(Karnataka Congress) ಮತ್ತು ಚಮಚಾ ಬುಧ್ದಿಜೀವಿ ವಲಯ ಬಾಬಾಸಾಹೇಬರ ಕೆಲವು ಜೀವನದ ಅಂಶಗಳನ್ನು ಪಠ್ಯಪುಸ್ತಕದಿಂದ ತೆಗೆದಿದ್ದಾರೆ ಅಂತ ಬೊಬ್ಬೆ ಹಾಕುತ್ತಿದ್ದಾರೆ. ಬಾಬಾಸಾಹೇಬರ ಬಗ್ಗೆ ಅವರ ಕಾಳಜಿ ನೋಡಿ ಖುಷಿಯಾಗುತ್ತಿದೆ.
ಕಾಂಗ್ರೆಸ್ ಮಾಡುವ ಪರಿಷ್ಕತ ಪಠ್ಯದಲ್ಲಿ ಬಾಬಾಸಾಹೇಬರ “ಕಾಂಗ್ರೆಸ್ ಮತ್ತು ಗಾಂಧಿ ಅಸ್ಪೃಶ್ಯರಿಗೆ ಏನು ಮಾಡಿದರು” (1945) ಎಂಬ ಪಾಠ ಇರಲಿದೆಯಾ? ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.