ಬೆಂಗಳೂರು, ಜು. 19: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈ ನಡುವೆ ನಟ ದರ್ಶನ್, ತಮ್ಮ ಮೇಲೆ ಕೇಳಿ ಬಂದಿರುವ ಆರೋಪದ ಕುರಿತು ಪ್ರತಿಕ್ರಿಯಿಸುವ ಸಂದರ್ಭದಲ್ಲಿ ನೀಡಿರುವ ಹೇಳಿಕೆ ನಿರ್ದೇಶಕ ಪ್ರೇಮ್ ಹಾಗೂ ನಟಿ ರಕ್ಷಿತಾ ಪ್ರೇಮ್ ಅವರಲ್ಲಿ ಅಸಮಾಧಾನ ಮೂಡಿಸಿದೆ.
ಮೈಸೂರಿನಲ್ಲಿ ಶನಿವಾರ ಸಂಜೆ ಮಾಧ್ಯಮಗಳ ಎದುರು ಮಾತನಾಡಿದ ನಟ ದರ್ಶನ್ ನಿರ್ದೇಶಕ ಪ್ರೇಮ್ ಕುರಿತಾಗಿ ಕೆಲ ಮಾತುಗಳನ್ನು ಆಡಿದ್ದರು. ಆದರೆ ಚಾಲೆಂಜಿಂಗ್ ಸ್ಟಾರ್ ಮಾತಿನಿಂದ ಬೇಸರಗೊಂಡ ಪ್ರೇಮ್ ಹಾಗೂ ರಕ್ಷಿತಾ ಪ್ರೇಮ್ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಸಮಾಧಾನ ಹೊರ ಹಾಕಿದ್ದು, ದರ್ಶನ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.
ನಿರ್ದೇಶಕ ಪ್ರೇಮ್ ಪ್ರತಿಕ್ರಿಯೆ
ದರ್ಶನ್ ಅವ್ರೆ, ನಾನು ಕರಿಯ ಸಿನಿಮಾ ಮಾಡ್ಬೇಕಾದ್ರೆ ಯಾವ್ ಪುಡಂಗುನೂ ಅಲ್ಲಾ ನಂಗ್ ಕೊಂಬು ಇರ್ಲಿಲ್ಲ.. ನಾನೊಬ್ಬ ಸಾಮಾನ್ಯ ನಿರ್ದೇಶಕ. ರಾಜಕುಮಾರ್ ರವರು, ಅಂಬರೀಷ್ ರವರು, ವಿಷ್ಣುವರ್ಧನ್ ರವರು ಹಾಗೂ ರಜನಿಕಾಂತ್ ರವರು ಒಬ್ಬ ಒಳ್ಳೆ ನಿರ್ದೇಶಕ ಅಂದು ಬೆನ್ನು ತಟ್ಟಿದ್ರು. ಇಡೀ ಕರ್ನಾಟಕ ಜನತೆ ಹರಸಿ ಹಾರೈಸಿ ಹ್ಯಾಟ್ರಿಕ್ ನಿರ್ದೇಶಕ ಅಂತ ಬಿರುದು ಕೊಟ್ಟಾಗ್ಲು ನನಗ್ ಕೊಂಬು ಬರ್ಲಿಲ್ಲ.
ನಾನು ನಂದೇ ಆದ್ ಸ್ಟೈಲ್ ನಲ್ಲಿ ಸಿನಿಮಾ ಮಾಡ್ಕೊಂಡು ಬಂದೋವ್ನು.. ಸುಮಾರು ನಿರ್ಮಾಪಕರುಗಳು ಹಾಗೂ ನಿಮ್ಮ ಅಭಿಮಾನಿಗಳು ಹಾಗೂ ನನ್ನ ಅಭಿಮಾನಿಗಳು ಪ್ರತಿ ಸಾರಿ ದರ್ಶನ್ ಹಾಗೂ ನಿಮ್ಮ ಕಾಂಬಿನೇಶನ್ ನಲ್ಲಿ ಯಾವಾಗ ಚಿತ್ರ ಮಾಡ್ತಿರಂತ ಕೇಳ್ತಾನೆಯಿದ್ರು. ಇದ್ರ ಬಗ್ಗೆ ನಿಮಗೂ ಗೊತ್ತು ನನಗು ಗೊತ್ತು. ಇಬ್ಬರು ಸೇರಿ ಸಿನಿಮಾ ಮಾಡೋದ್ರ ಬಗ್ಗೆ ಚೆರ್ಚೆ ಮಾಡಿದ್ವಿ.
ನಾನು ನಮ್ ಬ್ಯಾನರ್ ನಲ್ ಸಿನಿಮಾ ಮಾಡಿ ಇಲ್ಲಾ ನಿಮ್ ಬ್ಯಾನರ್ ನಲ್ ಸಿನಿಮಾ ಮಾಡೋಣ ಅಂತ ಮತ್ತೆ ಚರ್ಚೆ ಮಾಡಿದ್ವಿ. ಆದರೆ ನನಗೆ ಉಮಾಪತಿಯವರು, ನೀವು ಹಾಗೂ ದರ್ಶನ್ ಸೇರಿ ನಂಗ್ ಸಿನಿಮಾ ಮಾಡ್ಕೊಡಿ ಅಂತ ಅಂದ್ರು. ಅದಿಕ್ಕೆ ನಾನು ಉಮಾಪತಿ ಅವ್ರನ್ನ ನಿಮಗೆ ಪರಿಚಯ ಮಾಡಿ.. ಮೂರು ಜನ ಸೇರಿ ಸಿನಿಮಾ ಮಾಡೋಣ ಅಂತ ಡಿಸೈಡ್ ಮಾಡಿದ್ವಿ.. ಆದ್ರೆ ನನ್ ದಿ ವಿಲ್ಲನ್ ಸಿನಿಮಾ ಲೇಟ್ ಆದ ಕಾರಣ ನಾನೇ ಉಮಾಪತಿಯವರಿಗೆ ದರ್ಶನ್ ಅವ್ರ ಡೇಟ್ ಇದ್ದ ಕಾರಣ ಬೇರೆ ನಿರ್ದೇಶಕರನ್ನ ಹಿಡಿದು ಸಿನಿಮಾ ಮಾಡಿ ಅಂತ ಹೇಳಿದ್ದೆ.
ನನ್ನ ಸಂಭಾವನೆಯನ್ನ ಉಮಾಪತಿಯವರಿಗೆ ವಾಪಾಸ್ ನೀಡಿ ರಾಬರ್ಟ್ ಸಿನಿಮಾ ಗೆ ಹಾರೈಸಿದವನು ನಾನು.. ಅದೇ ರೀತಿ ರಾಬರ್ಟ್ ಚಿತ್ರ ಹಿಟ್ ಆಯ್ತು, ಎಲ್ಲರ ಹಾಗೇ ನಾನು ಖುಷಿ ಪಟ್ಟೆ.. ಇದ್ರ ಮದ್ಯೆ ನನ್ ಹೆಸ್ರು ಯಾಕೆ.. ದರ್ಶನ್ ಅವ್ರೆ ನಿರ್ದೇಶಕ್ರು ಯಾವ್ ಪುಡಂಗಿಗಳು ಅಲ್ಲಾ, ಅವ್ರಿಗೆ ಕೊಂಬು ಇರಲ್ಲ.. ತೆರೆಮೇಲೆ ಒಬ್ಬ ನಟನನ್ನ ಹುಟ್ಟಾಕಿ ಅವ್ನಿಗ್ ಕೊಂಬು ಬರ್ಬೇಕಾದ್ರೆ ನಿರ್ದೇಶಕನ ಶ್ರಮ ಎಷ್ಟಿರುತ್ತೆಂತ ಪ್ರತಿಯೊಬ್ಬ ಕಲಾವಿದರಿಗೂ ಗೊತ್ತು ಅದು ನಿಮ್ಗೂ ಗೊತ್ತು.. ದಯವಿಟ್ಟು ಇನ್ನೊಬ್ರ ಬಗ್ಗೆ ಮಾತಾಡ್ಬೇಕಾದ್ರೆ ಯೋಚಿಸಿ ಮಾತಾಡಿ ದರ್ಶನ್ ಅವರೇ… Thank you for your kind words. ದೇವ್ರು ನಿಮಗೆ ಒಳ್ಳೇದ್ ಮಾಡ್ಲಿ.
ನಟಿ ರಕ್ಷಿತಾ ಹೇಳಿದ್ದೇನು?
ಇನ್ನು ನಟಿ ರಕ್ಷಿತಾ ಕೂಡ ಪರೋಕ್ಷವಾಗಿ ಮಾತನಾಡಿದ್ದು, “ಇದು ನಮ್ಮ ಚಿತ್ರರಂಗ. ನಮ್ಮ ಮನೆ, ಇಲ್ಲಿ ಯಾರೂ ದೊಡ್ಡವರಲ್ಲ, ಚಿಕ್ಕವರಲ್ಲ. ಅವರ ಕೆಲಸ ಚಿಕ್ಕವರು, ದೊಡ್ಡವರನ್ನಾಗಿ ಮಾಡಬಹುದು. ನಾವೆಲ್ಲರೂ ಪರಸ್ಪರ ಒಬ್ಬರನ್ನು ಒಬ್ಬರು ಗೌರವಿಸುತ್ತೇವೆ. ಈ ರೀತಿ ಘಟನೆಗಳು ನಡೆದಾಗ ಬೇಸರ ಆಗುತ್ತದೆ, ದುರದೃಷ್ಟಕರ. ನಾನು ಜನರನ್ನು ಪ್ರೀತಿಸುವೆ” ಎಂದು ಇನ್ಸ್ಟಾಗ್ರಾಮ್ ಸ್ಟೇಟಸ್ ಹಾಕಿಕೊಂಡು ಪರೋಕ್ಷವಾಗಿ ದರ್ಶನ್ ಹಾಗೂ ಪ್ರೇಮ್ ನಡುವೆ ನಡೆದ ಗಲಾಟೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.