ಬೆಂಗಳೂರು: ಭಾರತೀಯ ಸಿನಿಮಾದಲ್ಲಿ ಭಾರೀ ನಿರೀಕ್ಷೆ ಮೂಡಿಸಿರೋ ಕೆಜಿಎಫ್-2 ಚಿತ್ರ ಬಿಡುಗಡೆಗೆ ತಯಾರಿ ನಡೆಯುತ್ತಿರುವ ಬೆನ್ನಲ್ಲೇ ಕೋಟ್ಯಾಂತರ ಅಭಿಮಾನಿಗಳಿಗೆ “ಅಧೀರ”ನ ದರ್ಶನವಾಗಿದೆ.
ನಟ ಸಂಜಯ್ ದತ್ ಬರ್ತಡೇ ಹಿನ್ನೆಲೆಯಲ್ಲಿ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ಕೊಟ್ಟಿರುವ ಕೆಜಿಎಫ್-2 ಚಿತ್ರತಂಡ, ಚಿತ್ರದ ಪ್ರಮುಖ ಪಾತ್ರವಾಗಿರುವ ಅಧೀರನ ದರ್ಶನ ಪಡೆಯುವ ಅವಕಾಶ ಕಲ್ಪಿಸಿದೆ. ಖಡ್ಗ ಹಿಡಿದು ಖಡಕ್ ಆಗಿ ನಿಂತ ಅಧೀರನ ಲುಕ್ ಸಿನಿಪ್ರಿಯರ ಮನಸನ್ನು ಗೆದ್ದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
ಸಂಜಯ್ ದತ್ ಹುಟ್ಟುಹಬ್ಬಕ್ಕೆ ಟೀಸರ್ ಬಿಡುಗಡೆಯಾಗುವ ಬಗ್ಗೆ ಸಾಕಷ್ಟು ನಿರೀಕ್ಷೆ ಇತ್ತು. ಆದರೆ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಬಳಗ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ತಮ್ಮ ಪ್ರೀತಿಯ ಅಧೀರನಿಗೆ ಹುಟ್ಟುಹಬ್ಬದ ಶುಭಾಶಯವನ್ನ ಕೋರಿದೆ. ಚಿತ್ರ ತಂಡ ಕೊಟ್ಟಿರೋ ಈ ಗಿಫ್ಟ್ ನಟ ಸಂಜಯ್ ದತ್ ಅವರಿಗೂ ಖುಷಿ ನೀಡಿದೆ.