ಬೆಂಗಳೂರು, ಏ. 14: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮರುದಿನವೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಬಿಗ್ ಬಾಸ್ ಖ್ಯಾತಿಯ ನಟಿ ಚೈತ್ರ ಕೋಟೂರು, ಇದೀಗ ಪತಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ತನ್ನನ್ನು ಮದುವೆಯಾಗಿ ವಂಚನೆ ಮಾಡಿರುವ ನಾಗಾರ್ಜುನನನ್ನು ಕರೆಸಿ ಬುದ್ದಿಮಾತು ಹೇಳುವಂತೆ ಕೋರಿ ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೋಟೂರು ಗಂಡನ ವಿರುದ್ಧ ಬಸವನಗುಡಿ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ.
ನಾಗಾರ್ಜುನ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡು, ಮದುವೆಯಾಗಿ ವಂಚನೆ ಮಾಡಿದ್ದಾನೆ. ತನ್ನ ಜೊತೆ ಸಂಸಾರ ಮಾಡುವುದಿಲ್ಲ ಎನ್ನುತ್ತಿದ್ದಾರೆ. ಈ ಬಗ್ಗೆ ಅವರನ್ನು ಕರೆಸಿ ಬುದ್ದಿ ಮಾತು ಹೇಳುವಂತೆ ಚೈತ್ರಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಸಂಬಂಧ ಬಸವನಗುಡಿ ಮಹಿಳಾ ಪೊಲೀಸರು ಎನ್ಸಿಆರ್ ದಾಖಲು ಮಾಡಿಕೊಂಡಿದ್ದಾರೆ.
ಬಿಗ್ ಬಾಸ್ ಸೀಸನ್-7ರ ಸ್ಪರ್ಧಿ ಚೈತ್ರಾ ಕೊಟ್ಟೂರು ಅವರು ಕಳೆದ ಕೆಲವು ದಿನಗಳ ಹಿಂದಷ್ಟೇ ಮಂಡ್ಯ ಮೂಲದ ನಾಗಾರ್ಜುನ್ ಅವರೊಂದಿಗೆ ಬೆಂಗಳೂರಿನ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಆದರೆ ಮದುವೆಯಾದ ಒಂದೇ ದಿನಕ್ಕೆ ಇಬ್ಬರೂ ಕೋಲಾರದ ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಅಲ್ಲದೇ ಕಳೆದ ಕೆಲವು ದಿನಗಳ ಹಿಂದಷ್ಟೇ ನಟಿ ಚೈತ್ರ ಅವರು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದರು.