ಕಾಶ್ಮೀರಿ ಪಂಡಿತರ(Kashmiri Pandits) ಹತ್ಯಾಕಾಂಡದ ಕುರಿತು ನಟಿ(Actress) ಸಾಯಿ ಪಲ್ಲವಿ(Sai Pallavi) ನೀಡಿರುವ ಹೇಳಿಕೆಯ ವಿರುದ್ದ ಹೈದ್ರಾಬಾದ್‌ನ ಸುಲ್ತಾನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಜೂನ್ ೨೧ ರೊಳಗೆ ತನಿಖಾಧಿಕಾರಿಗಳ ಮುಂದೆ ಖುದ್ದು ಹಾಜರಾಗುವಂತೆ ನೀಡಿರುವ ನೋಟಿಸನ್ನು ರದ್ದುಗೊಳಿಸುವಂತೆ ನಟಿ ಸಾಯಿ ಪಲ್ಲವಿ ಸಲ್ಲಿಸಿದ್ದ ಅರ್ಜಿಯನ್ನು ತೆಲಂಗಾಣ ಹೈಕೋರ್ಟ್(Telangana Highcourt) ರದ್ದು ಪಡಿಸಿದೆ.

ಪೊಲೀಸರು ವಿಚಾರಣೆಗಾಗಿ ನೀಡಿರುವ ನೋಟಿಸ್ ರದ್ದು ಪಡಿಸಲು ಸಾಧ್ಯವಿಲ್ಲ. ನೀವು ಖುದ್ದು ಹಾಜರಾಗಿ ವಿಚಾರಣೆಯನ್ನು ಎದುರಿಸಿ, ಈ ವಿಚಾರದಲ್ಲಿ ನ್ಯಾಯಾಲಯವು ಮಧ್ಯ ಪ್ರವೇಶಿಸುವುದಿಲ್ಲ ಎಂದು ನ್ಯಾಯಮೂರ್ತಿ ಲಲಿತಾ ಅವರ ನೇತೃತ್ವದ ಏಕಸದಸ್ಯ ಪೀಠ ಹೇಳಿದೆ. ನಟಿ ಸಾಯಿ ಪಲ್ಲವಿ ಮಾದ್ಯಮವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಹಸು ಕಳ್ಳ ಸಾಗಾಣಿಕೆದಾರರ ಹತ್ಯೆಯನ್ನು ಕಾಶ್ಮೀರಿ ಪಂಡಿತರ ಹತ್ಯೆಗೆ ಹೋಲಿಕೆ ಮಾಡಿ ಮಾತನಾಡಿದ್ದರು. ಅವರ ಈ ಹೇಳಿಕೆಯ ವಿರುದ್ದ ಭಜರಂಗದಳದ ಕಾರ್ಯಕರ್ತ ಅಖಿಲ್ ನೀಡಿದ ದೂರಿನ ಮೇರೆಗೆ ಹೈದ್ರಾಬಾದ್‌ನ ಸುಲ್ತಾನ್ ಬಜಾರ್ ಪೊಲೀಸರು ದೂರು ದಾಖಲಿಸಿಕೊಂಡಿದ್ದರು.
ಈ ಕುರಿತು ವಿಚಾರಣೆಗಾಗಿ ಜೂನ್ ೨೧ ರೊಳಗೆ ತನಿಖಾಧಿಕಾರಿಗಳ ಮುಂದೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿದ್ದರು. ಸಾಯಿ ಪಲ್ಲವಿ ಹೇಳಿಕೆ : ಕಾಶೀರಿ ಪಂಡಿತರ ಹತ್ಯೆ ಮತ್ತು ಗೋಕಳ್ಳರ ಹತ್ಯೆ ಎರಡು ಒಂದೇ. ಎರಡೂ ಅಪರಾಧಗಳು. ಹೀಗಾಗಿ ಈ ಎರಡರ ಮಧ್ಯೆ ನನಗೆ ವ್ಯತ್ಯಾಸ ಕಾಣುತ್ತಿಲ್ಲ. ಎಡಪಂಥೀಯ ಮತ್ತು ಬಲಪಂಥೀಯರ ಬಗ್ಗೆ ನಾನು ಕೇಳಿದ್ದೇನೆ. ಆದರೆ, ಯಾರು ಸರಿ? ಯಾರು ತಪ್ಪು? ಎಂದು ನಾನು ಹೇಳಲಾರೆ. ಕಾಶ್ಮೀರಿ ಪಂಡಿತರನ್ನು ಹೇಗೆ ಕೊಂದರು ಎನ್ನುವುದು ಎಲ್ಲರಿಗೂ ಗೊತ್ತಿದೆ.

ಇತ್ತೀಚೆಗೆ ಹಸುವನ್ನು ಹೊತ್ತೊಯ್ದಿದ್ದಕ್ಕೆ ಮುಸ್ಲಿಂ ವ್ಯಕ್ತಿಯನ್ನು ಹತ್ಯೆ(Murder) ಮಾಡಲಾಗಿದೆ. ವ್ಯಕ್ತಿಯನ್ನು ಕೊಂದ ನಂತರ ದಾಳಿಕೋರರು ‘ಜೈ ಶ್ರೀ ರಾಮ್’ ಘೋಷಣೆಗಳನ್ನು ಕೂಗಿದ್ದಾರೆ. ಕಾಶ್ಮೀರದಲ್ಲಿ ನಡೆದದ್ದಕ್ಕೂ ಇತ್ತೀಚೆಗೆ ನಡೆದದ್ದಕ್ಕೂ ವ್ಯತ್ಯಾಸ ಎಲ್ಲಿದೆ? ಎಂದು ನಟಿ ಸಾಯಿ ಪಲ್ಲವಿ ಪ್ರಶ್ನಿಸಿದ್ದರು.