ಹಿಜಾಬ್ ವಿವಾದ ರಾಜ್ಯದಲ್ಲಿ ತಾರಕಕ್ಕೇರಿರುವ ಬೆನ್ನಲ್ಲೇ ಮಹರಾಷ್ಟ್ರದ ಸಚಿವ ಆದಿತ್ಯ ಠಾಕ್ರೆ ಕೂಡ ಇದಕ್ಕೆ ಪ್ರತಿಕ್ರಿಯೆ ನೀಡಿದ್ದು ಶಾಲೆಗಳಲ್ಲಿ ಸಮವಸ್ತ್ರವಿದ್ದರೆ, ಅದನ್ನು ಹೊರತುಪಡಿಸಿ ಬೇರೆ ಯಾವುದೇ ಉಡುಗೆಗೆ ಅವಕಾಶ ನೀಡಬಾರದು. ಶಾಲೆಗಳು ಮತ್ತು ಕಾಲೇಜುಗಳು ಶಿಕ್ಷಣದ ಕೇಂದ್ರಗಳಾಗಿವೆ. ಅಲ್ಲಿ ಶಿಕ್ಷಣವನ್ನು ಮಾತ್ರ ನೀಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶಿಕ್ಷಣ ಸಂಸ್ಥೆಗಳಲ್ಲಿ ಯಾವುದೇ ರಾಜಕೀಯ, ಧಾರ್ಮಿಕ ವಿಷಯಗಳಿಗೆ ಪ್ರಾತಿನಿಧ್ಯ ಇರಬಾರದು ಎಂದು ಒತ್ತಿ ಹೇಳಿದ ಮಹಾರಾಷ್ಟ್ರ ಸಚಿವ ಆದಿತ್ಯ ಠಾಕ್ರೆ, ಶಾಲಾ ಮತ್ತು ಕಾಲೇಜುಗಳಲ್ಲಿ ಯಾವುದೇ ರಾಜಕೀಯ, ಧಾರ್ಮಿಕ ಅಥವಾ ಅಂತಹ ಯಾವುದೇ ವಿಷಯವನ್ನು ತರಬಾರದು. ಶಿವಸೇನೆಗೆ ಒಂದೇ ಒಂದು ಪಾತ್ರವಿದೆ. ಅದು ಶಾಲೆಗಳಲ್ಲಿ ಉನ್ನತ ದರ್ಜೆಯ ಶಿಕ್ಷಣ ಸೌಲಭ್ಯಗಳನ್ನು ಒದಗಿಸುವುದು ಆಗಿದೆ ಎಂದರು.

ಇಂದು ಹೈಕೋರ್ಟ್ ವಿಶೇಷ ಪೀಠದಿಂದ ವಿಚಾರಣೆ
ಹಿಜಾಬ್ ವಿವಾದ ಹೈಕೋರ್ಟ್ ಮೆಟ್ಟಿಲೇರಿದ್ದು, ಈ ಬಗ್ಗೆ ಇಂದು ಮಧ್ಯಾಹ್ನ 2.30 ಕ್ಕೆ ವಿಶೇಷ ಪೀಠದಿಂದ ವಿಚಾರಣೆ ನಡೆಯಲಿದೆ. ಈ ನಡುವೆ ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರ ಏಕ ಪೀಠವು ಕಾಲೇಜುಗಳಲ್ಲಿ ಹಿಜಾಬ್ ನಿಷೇಧವನ್ನು ಪ್ರಶ್ನಿಸುವ ಅರ್ಜಿಗಳನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಿದೆ.

ಹಿಜಾಬ್ ಧರಿಸಲು ಅನುಮತಿ ಕೋರಿದ್ದ ಉಡುಪಿಯ ವಿದ್ಯಾರ್ಥಿಗಳ ಅರ್ಜಿ ಮತ್ತು ಇದೇ ವಿಚಾರದಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಲು ಕರ್ನಾಟಕ ಹೈಕೋರ್ಟ್ನಲ್ಲಿ ವಿಶೇಷ ಪೀಠ ರಚನೆ ಮಾಡಿದೆ. ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನು ಒಳಗೊಂಡ ಪೂರ್ಣ ಪೀಠ ಗುರುವಾರ ಮಧ್ಯಾಹ್ನ 2.30 ರಿಂದ ಅರ್ಜಿ ವಿಚಾರಣೆ ನಡೆಯಲಿದೆ. ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ನೇತೃತ್ವದ ವಿಶೇಷ ಪೀಠದಲ್ಲಿ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್, ನ್ಯಾಯಮೂರ್ತಿ ಖಾಜಿ ಜೈಬುನ್ನಿಸಾ ಮೊಹಿದ್ದೀನ್ ಇದ್ದು, ಗುರುವಾರವೇ ವಿಚಾರಣೆ ಆರಂಭವಾಗಲಿದೆ.