ನವದೆಹಲಿ ಸೆ 7 : ತಾಲಿಬಾನಿಗಳ ಹಿಡಿತದಲ್ಲಿರುವ ಅಫ್ಘಾನಿಸ್ತಾನದ ಸಾಕಷ್ಟು ಪ್ರಜೆಗಳು ಈಗಾಗಲೇ ಅಫ್ಘಾನ್ ತೊರೆದು ಭಾರತಕ್ಕೆ ಆಗಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯವು ಭಾರತದಲ್ಲಿರುವ ಯಾವುದೇ ಅಫ್ಘಾನ್ ಪ್ರಜೆಯನ್ನು ಗೃಹ ಸಚಿವಾಲಯದ ಅನುಮತಿಯಿಲ್ಲದೆ ದೇಶವನ್ನು ತೊರೆಯುವಂತೆ ಯಾವುದೇ ರಾಜ್ಯ ಕೂಡ ಆದೇಶಿಸುವಂತಿಲ್ಲ ಎಂದು ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ.
ಕೆಲವು ದಿನಗಳ ಹಿಂದೆ ಅಫ್ಘಾನ್ ಸಂಸತ್ತಿನ ಸದಸ್ಯರಾದ ರಂಗಿನೆ ಕಾರ್ಗರ್ ಅವರನ್ನು ದೆಹಲಿಯಿಂದ ಇಸ್ತಾಂಬುಲ್ಗೆ ಗಡಿಪಾರು ಮಾಡಲಾಗಿತ್ತು. ನಂತರ ಅವರನ್ನು ಗಡಿಪಾರು ಮಾಡಿದ್ದಕ್ಕಾಗಿ ಗೃಹ ಸಚಿವಾಲಯ ಅವರ ಬಳಿ ಕ್ಷಮೆ ಕೂಡ ಕೇಳಲಾಗಿತ್ತು. ಈ ಹಿನ್ನಲೆಯಲ್ಲಿ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ ಯಾವುದೇ ಅಫ್ಘಾನ್ ಪ್ರಜೆಗಳನ್ನು ದೇಶ ಬಿಡುವಂತೆ ಕೇಳಬಾರದು ಮತ್ತು ಅಂತಹ ಎಲ್ಲ ಪ್ರಕರಣಗಳನ್ನು ಗೃಹ ಸಚಿವಾಲಯದ ಗಮನಕ್ಕೆ ತರಬೇಕು ಎಂಬ ಸೂಚನೆಯನ್ನು ಎಲ್ಲಾ ರಾಜ್ಯಗಳಿಗೆ ನೀಡಲಾಗಿದೆ.
ಅಮೆರಿಕದ ಸೇನಾ ಪಡೆಗಳು ಆಫ್ಘಾನಿಸ್ತಾನವನ್ನು ತೊರೆದ ಬಳಿಕ ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಸಾಕಷ್ಟು ಮಂದಿ ಅಫ್ಘಾನಿಸ್ತಾನವನ್ನು ತೊರೆದು ವಿವಿಧ ದೇಶಗಳಿಗೆ ಪಲಾಯನ ಮಾಡಿದ್ದಾರೆ.