ಪ್ರಾಣಿ ವಿನಿಮಯ ಯೋಜನೆ ಮೂಲಕ ದೇಶದ ಗಮನ ಸೆಳೆದಿರುವ ಮೈಸೂರು ಮೃಗಾಲಯ ಇದೀಗ ಪ್ರಾಣಿ ವಿನಿಮಯ ಯೋಜನೆಯ ವ್ಯಾಪ್ತಿಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ವಿಸ್ತರಿಸಿಕೊಂಡಿದೆ.

ಪ್ರಾಣಿ ವಿನಿಮಯ ಯೋಜನೆ ಮೂಲಕ ದೇಶದ ವಿವಿಧ ಭಾಗಗಳಿಂದ ಪ್ರಾಣಿಗಳನ್ನು ಮೈಸೂರು ಮೃಗಾಲಯಕ್ಕೆ ತರಲಾಗಿದ್ದು, ಹಲವು ಪ್ರಾಣಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಆದರೆ ಇದೇ ಮೊದಲ ಬಾರಿಗೆ ಪ್ರಾಣಿ ವಿನಿಮಯ ಯೋಜನೆ ಮೂಲಕ ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಮೃಗಾಲಯಕ್ಕೆ ವಿದೇಶಿ ಅತಿಥಿಯ ಆಗಮನವಾಗಿದೆ.

ಪ್ರಾಣಿ ವಿನಿಮಯ ಯೋಜನೆ ಮೂಲಕ ದೂರದ ದಕ್ಷಿಣ ಆಫ್ರಿಕಾದಿಂದ ಆಫ್ರಿಕನ್ ಚೀತಾ ಒಂದನ್ನು ಮೈಸೂರು ಮೃಗಾಲಯಕ್ಕೆ ತರಲಾಗಿದೆ. ಸಿಂಗಾಪುರ್ ಮಾರ್ಗವಾಗಿ ಮೈಸೂರು ಮೃಗಾಲಯಕ್ಕೆ ಬಂದಿರುವ ಆಫ್ರಿಕನ್ ಚೀತಾ ಈಗಾಗಲೇ ಮೈಸೂರು ಮೃಗಾಲಯ ತಲುಪಿದ್ದು, ಕ್ವಾರಂಟೈನ್ ಅವಧಿ ಪೂರ್ಣಗೊಂಡ ನಂತರ ಸಾರ್ವಜನಿಕ ವೀಕ್ಷಣೆಗೆ ಲಭ್ಯವಾಗಲಿದೆ.

ಮೈಸೂರು ಮೃಗಾಲಯದ ನಿರ್ದೇಶಕ ಅಜಿತ್ ನೇತೃತ್ವದ ತಂಡ ದೂರದ ದಕ್ಷಿಣ ಆಫ್ರಿಕಾದಿಂದ ಆಫ್ರಿಕನ್ ಚೀತಾವನ್ನು ಮೈಸೂರು ಮೃಗಾಲಯಕ್ಕೆ ತರುವಲ್ಲಿ ಯಶಸ್ವಿಯಾಗಿದೆ. ಮೃಗಾಲಯಕ್ಕೆ ಬಂದಿರುವ ಹೊಸ ಅತಿಥಿಯನ್ನು ಸಾರ್ವಜನಿಕ ವೀಕ್ಷಣೆಗೆ ಮುಕ್ತಗೊಳಿಸಲು ಮೃಗಾಲಯದಲ್ಲಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಮಾಹಿತಿಯನ್ನು ಮೃಗಾಲಯದ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.