ಈ ವಾರ ಸ್ಯಾಂಡಲ್‌ವುಡ್ ಫುಲ್ ಬ್ಯುಸಿ. ಮೂರು… ಮೂರು ಸಿನೆಮಾಗಳು ಒಟ್ಟೊಟ್ಟಿಗೆ ಒಂದೇ ದಿನ ತೆರೆಕಂಡು ಸಿನಿ ಪ್ರಿಯರಿಗೆ ಕೊಂಚ ಕನ್‌ಫ್ಯೂಸ್ ಮಾಡಿಸಿದೆ. ‘ಲೀಸ’, ‘ಎಲ್ಲೋ ಬೋರ್ಡ್’ ಮತ್ತು ‘ಅಘೋರ’ ಸಿನಿಮಾಗಳು ಏಕಕಾಲಕ್ಕೆ ಚಿತ್ರಮಂದಿರಕ್ಕೆ ಲಗ್ಗೆ ಇಟ್ಟಿವೆ.
ಈ ಮೂರು ಸಿನೆಮಾಗಳ ಪೈಕಿ ಅಘೋರ ಸೋಶಿಯಲ್ ಮೀಡಿಯಾದಲ್ಲಿ ಕೊಂಚ ಸದ್ದು ಮಾಡಿತ್ತು. ಹೀಗಾಗಿ ಅಘೋರ ಸಿನಿಮಾವನ್ನೇ ವೀಕ್ಷಿಸಿದೆ. ಸಿನಿಮಾ ವೀಕ್ಷಿಸಿದ ನನಗೆ ಅಚ್ಚರಿ, ಗೊಂದಲ ಎರಡೂ ಕಾಡಿತು.
ಯಾಕೆ ಅಂಥದ್ದೇನಿದೆ ಅಘೋರದಲ್ಲಿ? ಹಾರರ್ ಸಿನೆಮಾ ಅಂತ ಟ್ರೈಲರ್‌ನಲ್ಲಿ ತೋರಿಸಿದ ಚಿತ್ರ ತಂಡ ನಿಜವಾಗ್ಲೂ ಜನರನ್ನು ಹೆದರಿಸುವಲ್ಲಿ ಯಶಸ್ವಿಯಾಗಿದೆಯಾ? ಸಿನಿಪ್ರಿಯರನ್ನು ತುದಿಗಾಲಲ್ಲಿ ನಿಲ್ಲಿಸುವಂಥ ಥಿಲ್ಲರ್ ಚಿತ್ರ ಆಗಿತ್ತಾ? ಈ ಎಲ್ಲಾ ಪ್ರಶ್ನೆಗೆ ಉತ್ತರ ಹುಡುಕೋಣ ಈ ವಿಮರ್ಶೆಯಲ್ಲಿ.

ಹಾರರ್….! ನಿಜವಾಗ್ಲೂ `ಹಾರಿಬಲ್ ‘: ಈ ಚಿತ್ರ ಹಾರರ್, ಸಸ್ಪೆನ್ಸ್ ಜಾನರ್ ನಲ್ಲಿ ಮೂಡಿಬಂದಿರುವ ಕಾರಣ ಪ್ರೇಕ್ಷಕರು ಇದೊಂದು ಪಕ್ಕಾ ಹಾರರ್ ಸಿನಿಮಾ ಅಂತ ಭಾವಿಸಿ ಚಿತ್ರಮಂದಿರಕ್ಕೆ ಬರ್ತಾರೆ. ಆದರೆ, ಸಿನಿ ಪ್ರೇಕ್ಷಕರಿಗೆ ಥ್ರಿಲ್, ಸಸ್ಪೆನ್ಸ್ ಕೊಡುವಲ್ಲಿ ಸಿನಿಮಾ ತಂಡ ಸಂಪೂರ್ಣ ವಿಫಲವಾಗಿದೆ! ಕಥೆಯನ್ನು ಪ್ರೇಕ್ಷಕನಿಗೆ ತಲುಪಿಸಲು ಚಿತ್ರತಂಡ ಮತ್ತಷ್ಟು ಶ್ರಮಿಸ್ತಿದ್ರೆ ಯಶಸ್ಸು ಸಿಗ್ತಿತ್ತೋ ಏನೋ. ಪ್ರಥಮಾರ್ಧದಿಂದ ಕಥೆ ಕೊನೆಯವರೆಗೂ ಅದೇ ರಾಗ ಅದೇ ಹಾಡಿನಂತೆ ಬೋರ್ ಹೊಡಿಸಿದೆ. ಹಾರರ್ ಸಿನಿಮಾ ಎಂದಾಗ ಪ್ರೇಕ್ಷಕನನ್ನು ಒಮ್ಮೆಯಾದರೂ ಮೈ ನಡಗುವಂತೆ ಭಯಪಡಿಸಬೇಕು, ಪರದೆಯ ಮೇಲಿರುವ ಕಣ್ಣು ಅತ್ತ ಇತ್ತ ಜರುಗದಂತೆ ಕುತೂಹಲ ಕೆರಳಿಸಬೇಕು. ಆದರೆ ಇದ್ಯಾವುದು ಅಘೋರ ಸಿನಿಮಾದಲ್ಲಿ ಮೂಡಿಬರಲಿಲ್ಲ! ಚಿತ್ರಕಥೆಯನ್ನು ಉತ್ತಮವಾಗಿ ಕಟ್ಟಿಕೊಡುವಲ್ಲಿ ಸಿನಿಮಾ ಸೋತಿದೆ.

ಅಘೋರ ಸಿನಿಮಾ ವಿಜ್ಞಾನ ಆಧಾರಿತ, ಸಿನಿಮಾದ ಕೊನೆಯಲ್ಲಿ ಒಂದು ಅದ್ಭುತ ಸಂದೇಶ ಕೂಡ ಇದೆ ಅಂತ ನಿರ್ದೇಶಕರು ಹೇಳಿದ್ರು. ಸಿನಿಮಾದ ಪ್ರಾರಂಭದಲ್ಲಿ ಹಿರಿಯ ನಟ ಅವಿನಾಶ್ ಅವರು ಹೇಳುವ “ ಹುಟ್ಟು ಸಾವಿನ ನಡುವಿನ ಅಂತರ ಹುಡುಕುವ ಪ್ರಯತ್ನ…….” ಅನ್ನೋ ಒಂದು ಮುಖ್ಯ ಡೈಲಾಗ್ ಹೊರೆತುಪಡಿಸಿದರೆ ಬೇರೆ ಎಲ್ಲೂ ವಿಜ್ಞಾನಕ್ಕೆ ಸಂಬಂಧಿಸಿದಂತ ವಿಷಯ ತಿಳಿಸಿದ್ದಾಗಲೀ ಸಮಾಜಕ್ಕೆ ಉತ್ತಮ ಸಂದೇಶ ಕೊಟ್ಟಿದ್ದು ನಾ ಕಾಣೆ. ನಟ ಮತ್ತು ನಿರ್ಮಾಪಕರಾಗಿರುವ ಪುನೀತ್ ಗೌಡ ಅವರು ತಮ್ಮ ನಟನೆ ಮತ್ತು ಡೈಲಾಗ್ ಬಗ್ಗೆ ಹೆಚ್ಚು ಒತ್ತು ಕೊಟ್ಟಿದ್ದರೆ ಬಹುಶಃ ಮತ್ತಷ್ಟು ತೆರೆಮೇಲೆ ಮಿಂಚಬಹುದಿತ್ತು. ಸಿನಿ ಪ್ರೇಕ್ಷಕರಿಗೆ ಮನರಂಜನೆ ಪೂರ್ಣವಾಗಿ ತಲುಪಿಸಬಹುದಿತ್ತು. ‘ಪ್ರೇಕ್ಷಕನಿಗೆ ಭಯಪಡಿಸಲು ಹಲವು ದೃಶ್ಯಗಳನ್ನು ಸೃಷ್ಟಿಸಲಾಗಿದೆ. ಆ ದೃಶ್ಯಗಳು ಭಯದ ಬದಲು ನಗು ತರಿಸಿದ್ದು ಸೋಜಿಗ !
ಚೇರ್, ಟೇಬಲ್ ಗಳನ್ನು ಹಿಂದೆ ಮುಂದೆ ಮಾಡುವ ಮೂಲಕ ಭಯ ಸೃಷ್ಟಿಮಾಡುವ ಪ್ರಯತ್ನ ಮಾಡಿರುವುದು ಹಾಲಿವುಡ್‌ನ ಹಾರರ್ ಮೂವಿಗಳನ್ನೇ ನೋಡಿ ಹೆದರದ ಈಗಿನ ಪ್ರೇಕ್ಷಕನನ್ನು ಹೆದರಿಸುವಲ್ಲಿ ಫೇಲ್ ಆಗಿದೆ ಅಂತ ಬೇಸರದಿಂದಲೇ ಹೇಳ್ತಿದ್ದೀನಿ. ಈ ಸಿನಿಮಾದ ಮುಖ್ಯ ಸಂದೇಶ, ಸಾವಿನ ನಂತರ ಪುನರ್ ಜನ್ಮ ಇರುತ್ತಾ? ಆತ್ಮ ಇರುವುದು ಸತ್ಯವೋ ಅಥವಾ ಸುಳ್ಳೋ ಎಂಬುದನ್ನು ಹೇಳುವುದು. ಆದರೆ ಈ ಹಿಂದೆ ಬಂದಿರುವ ಎಷ್ಟೋ ಸಿನಿಮಾಗಳು ಇದನ್ನು ಈಗಾಗಲೇ ಪ್ರದರ್ಶಿಸಿವೆ. ಹೀಗಾಗಿ ಈ ಸಿನಿಮಾದಲ್ಲಿ ಅಂಥ ಹೊಸತೇನು ಕಾಣಲಿಲ್ಲ! ಹಾರರ್ ಜಾನರ್ಗೆ ವಿಎಫ್‌ಎಕ್ಸ್ ಅಷ್ಟು ಸಾಥ್ ನೀಡಿಲ್ಲ ಜೊತೆಗೆ ಸಿನಿಮಾವನ್ನು ಇನ್ನಷ್ಟು ವಿಭಿನ್ನವಾಗಿ ಪ್ರೇಕ್ಷಕರಿಗೆ ತಲುಪಿಸುವ ಕೆಲಸಕ್ಕೆ ಹೆಚ್ಚು ಆದ್ಯತೆಯನ್ನು ತಂಡ ಕೊಡಬೇಕಿತ್ತು. ಒಂದೇ ಒಂದು ಬಿಜಿಎಮ್ ಸೌಂಡ್ ಪದೇ ಪದೇ ಕೇಳಿಬಂದಿದೆ. ಅದೂ ಬೋರ್ ಹೊಡಿಸಿದೆ. ಇದಕ್ಕೆ ಬೇರೆ ಬಿಜಿಎಮ್ ಸೌಂಡ್ ಅಳವಡಿಸಿಕೊಳ್ಳಬಹುದಿತ್ತು ಆದ್ರೆ ತಂಡ ಅದನ್ನೂ ಮಾಡಿಲ್ಲ!
ಸಿನಿಮಾದ ಪಾಸಿಟಿವ್ ಅಂಶಗಳೇನು?

ಫಸ್ಟ್ ಹಾಫ್ ನಲ್ಲಿ ಹಿರಿಯ ನಟ ಅವಿನಾಶ್ ಅವರು ಅಘೋರಿ ಪಾತ್ರದಲ್ಲಿ ಎಂಟ್ರಿ ಕೊಟ್ಟು ಅಘೋರಿಗಳ ಬಗ್ಗೆ ಮತ್ತು ಹುಟ್ಟು ಸಾವಿನ ನಡುವೆ ಇರುವ ಒಂದು ಅಂತರದ ಬಗ್ಗೆ ಕೆಲ ವಿಷಯವನ್ನು ತಮ್ಮ ಧ್ವನಿಯಲ್ಲಿ ಪ್ರೇಕ್ಷಕರಿಗೆ ನೀಡಿರುವುದು ಒಂದೊಳ್ಳೆ ಸಂಗತಿಯಾಗಿದೆ. ಸಿನಿಮಾ ಪ್ರಾರಂಭವಾದ ಸ್ವಲ್ಪ ಸಮಯಕ್ಕೆ ಒಂದು ಹಾಡಿದೆ. ಈ ಒಂದು ಹಾಡು ಪ್ರೇಕ್ಷಕನಿಗೆ ಕೊಂಚ ಖುಷಿ ನೀಡುತ್ತದೆ. ಈ ಸಿನಿಮಾ ನಿರ್ದೇಶಕ ಪ್ರಮೋದ್ ರಾಜ್ ಅವರ ಚೊಚ್ಚಲ ನಿರ್ದೇಶನವಾದರೂ ಕೆಲ ಸಂಗತಿಯನ್ನು ಪ್ರೇಕ್ಷಕರಿಗೆ ತಿಳಿಸುವ ಪ್ರಯತ್ನ ನಿಜಕ್ಕೂ ಮೆಚ್ಚುವಂತದ್ದು.

ಅಘೋರ ಸಿನಿಮಾ ನಿರ್ದೇಶನಕ್ಕೆ ಪ್ರಮೋದ್ ರಾಜ್ ಅವರು ಪಟ್ಟಿರುವ ಶ್ರಮಕ್ಕೆ ಶ್ಲಾಘಿಸಲೇಬೇಕು. ಇನ್ನು ಈ ಸಿನಿಮಾದಲ್ಲಿ ಇಬ್ಬರು ನಟಿಯರಿದ್ದು, ಒಬ್ಬರು ರಚನಾ ದಶರಥ್ ಭೂಮಿ ಪಾತ್ರವನ್ನು ನಿರ್ವಹಿಸಿದ್ದಾರೆ. ಮತ್ತೊಬ್ಬರು ಚಿಕ್ಕಮಗಳೂರಿನ ಬೆಡಗಿ ದ್ರವ್ಯ ಶೆಟ್ಟಿ ಅವರು ಪ್ರಕೃತಿ ಪಾತ್ರದಲ್ಲಿ ನಟಿಸಿದ್ದಾರೆ. ಇಬ್ಬರು ನಟಿಯರು ಕೂಡ ತಮಗೆ ಕೊಟ್ಟ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ನಟಿ ದ್ರವ್ಯ ಶೆಟ್ಟಿ ಅವರ ಪ್ರಕೃತಿ ಪಾತ್ರಕ್ಕೆ ಇನ್ನಷ್ಟು ಒತ್ತು ಕೊಡಬೇಕಿತ್ತು! ಸಿನಿಮಾದ ಕ್ಲೈಮ್ಯಾಕ್ಸ್ ರೊಮ್ಯಾಂಟಿಕ್ ಸೀನ್ ಮೂಲಕ ಕೊನೆಗೊಳ್ಳುತ್ತೆ.

ಕನ್ನಡಿಗರಲ್ಲಿ ಮನವಿ : “ಕನ್ನಡ ಸಿನಿಮಾಗಳನ್ನು ಚಿತ್ರಮಂದಿರಗಳಿಗೆ ಹೋಗಿ ವೀಕ್ಷಿಸಿ ವಿನಃ ಪೈರಸಿಯಲ್ಲಿ ಬಂದ ಲಿಂಕ್ ಅಥವಾ ಓಟಿಟಿ ರಿಲೀಸ್ಗೆ ಕಾಯಬೇಡಿ. ಕನ್ನಡ ಚಿತ್ರಗಳನ್ನು ಚಿತ್ರಮಂದಿರಕ್ಕೆ ಹೋಗಿ ವೀಕ್ಷಿಸುವ ಮೂಲಕ ಆಯಾ ಸಿನಿಮಾದ ನಟ, ನಟಿ, ತಂತ್ರಜ್ಞರು ಸೇರಿದಂತೆ ತೆರೆ ಹಿಂದಿನ ತಂತ್ರಜ್ಞರು, ಲೈಟ್ ಬಾಯ್ಸ್ ಎಲ್ಲರ ಶ್ರಮಕ್ಕೆ ಪ್ರೋತ್ಸಾಹ ನೀಡಿದಂತೆಯೇ ಸರಿ”.
- ಮೋಹನ್ ಶೆಟ್ಟಿ