ಕೇಂದ್ರ ಸರ್ಕಾರ(Central Government) ‘ಅಗ್ನಿಪಥ್’ ಎಂಬ ಯೋಜನೆಯೊಂದನ್ನು(Agnipath Yojana) ಘೋಷಣೆ ಮಾಡಿದೆ. 17.5 ವರ್ಷದಿಂದ 23 ವರ್ಷದೊಳಗಿನ ಯುವಕರಿಗೆ ನಾಲ್ಕು ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಲು ಈ ಯೋಜನೆಯಡಿ ಅವಕಾಶ ನೀಡಲಾಗಿದೆ. ಆದರೆ ಈ ಯೋಜನೆಯನ್ನು ವಿರೋಧಿಸಿ ಉತ್ತರಭಾರತದ ಅನೇಕ ರಾಜ್ಯಗಳಲ್ಲಿ ಯುವಕರು ಪ್ರತಿಭಟನೆ ಹೆಸರಲ್ಲಿ ಪುಂಡಾಟಿಕೆ ನಡೆಸಿದ್ದಾರೆ.

ಬಿಹಾರ(Bihar) ಮತ್ತು ಮದ್ಯಪ್ರದೇಶದಲ್ಲಿ(MadhyaPradesh) 22 ರೈಲುಗಳಿಗೆ ಬೆಂಕಿ ಹಚ್ಚಿದ್ದಾರೆ. ಹೆದ್ದಾರಿ ತಡೆದು ಖಾಸಗಿ ವಾಹನಗಳಿಗೆ ಬೆಂಕಿ ಹಚ್ಚಿದ್ದು, ಅನೇಕ ಕಡೆ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಬೆಂಕಿ ಹಚ್ಚಿದ್ದಾರೆ. ಪ್ರತಿಭಟನೆ ಹೆಸರಲ್ಲಿ ತೀವ್ರ ಹಿಂಸಾಚಾರ(Voilence) ದೃಷ್ಟಿಸಿದ್ದಾರೆ. ಇದೆಲ್ಲವನ್ನೂ ನೋಡಿದಾಗ, ದೇಶದ ಕುರಿತು ಕಿಂಚಿತ್ತೂ ಅಭಿಮಾನವಿಲ್ಲದ, ಸಾರ್ವಜನಿಕ ಆಸ್ತಿಪಾಸ್ತಿಗಳ ರಕ್ಷಣೆ ಕುರಿತು ಜ್ಞಾನವಿಲ್ಲದ ಇಂತಹ ಬುದ್ದಿಹೀನ ಯುವಕರು ದೇಶಸೇವೆಗೆ ಅರ್ಹರೇ..? ಎಂಬ ಪ್ರಶ್ನೆ ಮೂಡುತ್ತದೆ.
ಪ್ರತಿಭಟನೆ ಮಾಡುವುದು ಸಾಂವಿಧಾನಿಕ ಹಕ್ಕು. ಆದರೆ ಅದು ಸಾರ್ವಜನಿಕ ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗಬಾರದು. ಆದರೆ ಇಂದು ಅಗ್ನಿಪಥ್ ಯೋಜನೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಯುವಕರು ಪೂರ್ಣಾವಧಿಯಾಗಿ ಸೇನೆಗೆ ಸೇರಲು ಅವಕಾಶ ನೀಡಬೇಕೆಂದು ಆಗ್ರಹಿಸುತ್ತಿದ್ದಾರೆ. ಅಂದರೆ ಮುಂದೆ ಇವರೇ ದೇಶ ಕಾಯುವ ಯೋಧರು. ಪೂರ್ಣಾವಧಿಯಲ್ಲಿ ದೇಶಕ್ಕೆ ಸೇವೆ ಸಲ್ಲಿಸಲು ಸೈನಿಕರಾಗಲು ಮುಂದಾಗಿರುವ ಇವರೆಲ್ಲರೂ ಹೀಗೆ ದೇಶದ ಆಸ್ತಿಗಳಿಗೆ ಬೆಂಕಿಹಚ್ಚಿ, ಹಿಂಸಾಚಾರ ಸೃಷ್ಟಿಸುತ್ತಿರುವುದನ್ನು ನೋಡಿದರೆ ಆಘಾತವಾಗುತ್ತದೆ.

ಕನಿಷ್ಠ ಪ್ರಜ್ಞೆಯಿಲ್ಲದ ಈ ರೀತಿಯ ಯುವಕರು ಸೇನೆಗೆ ಸೇರಲು ಹೇಗೆ ಅರ್ಹರಾಗುತ್ತಾರೆ. ಬೆಂಕಿ ಹಚ್ಚಿ ಪುಂಡಾಟಿಕೆ ನಡೆಸುವ ಮನೋಭಾವದವರು ಎಂದಿಗೂ ದೇಶಕ್ಕೆ ಸೇವೆ ಸಲ್ಲಿಸಲಾರರು. ಇನ್ನು ಈ ಯೋಜನೆಯಡಿ ಸೇನೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡಲಾಗಿದೆ. ಬೇಕಿದ್ದವರು ಅದರ ಸದುಪಯೋಗ ಪಡಿಸಿಕೊಳ್ಳಬಹುದು. ಇಲ್ಲದವರು ಬೇರೆ ಉದ್ಯೋಗ ಹುಡುಕಿಕೊಳ್ಳಬೇಕು. ಪೂರ್ಣಾವಧಿಯಲ್ಲಿ ಸೇನೆಗೆ ಸೇರಲು ಕೂಡಾ ಬೇರೆ ಅವಕಾಶಗಳಿವೆ.
ಹೀಗಾಗಿ ಯುವಕರು ತಾವು ನಡೆಸುತ್ತಿರುವ ಪ್ರತಿಭಟನೆ ಕುರಿತು ಮರು ಚಿಂತನೆ ನಡೆಸಬೇಕಿದೆ. ಕೊನೆಯದಾಗಿ ಯೋಜನೆಯನ್ನು ವಿರೋಧಿಸುವುದಾದರೆ ಶಾಂತಿಯುತ ಪ್ರತಿಭಟನೆ ಮೂಲಕ ನಿಮ್ಮ ವಿರೋಧವನ್ನು ದಾಖಲಿಸಿ. ಹಿಂಸೆ ಯಾವುದಕ್ಕೂ ಪರಿಹಾರವಲ್ಲ.