ಧ್ವನಿ ಕಳೆದುಕೊಂಡವರಿಗೆ AIಯಿಂದ (AI voices for voiceless) ಮತ್ತೆ ಮಾತಿನ ಭಾಗ್ಯ
ಕ್ಯಾನ್ಸರ್, ALS ಸೇರಿದಂತೆ ಹಲವು ಕಾಯಿಲೆಗಳಿಂದ ಧ್ವನಿ ಕಳೆದುಕೊಂಡವರಿಗೆ ನೆರವಾಗಲು ಮುಂದಾದ ಕರ್ನಾಟಕ ಸರ್ಕಾರ
ಡೀಪ್‌ಫೇಕ್ ತಡೆಯುವ ಸುರಕ್ಷತಾ ಕ್ರಮಗಳ ಜತೆಗೆ ಧ್ವನಿ ಕಳೆದುಕೊಂಡವರಿಗೆ ಎಲೆವನ್ ಲ್ಯಾಬ್ಸ್ ಜೊತೆ ಮಹತ್ವದ ಒಪ್ಪಂದ
ಕ್ಯಾನ್ಸರ್, ಎಎಲ್‌ಎಸ್ ಹಾಗೂ ವಿವಿಧ ನರವೈಜ್ಞಾನಿಕ ಕಾಯಿಲೆಗಳಿಂದ ಮಾತನಾಡುವ (AI voices for voiceless) ಸಾಮರ್ಥ್ಯ ಕಳೆದುಕೊಂಡವರಿಗೆ ಮತ್ತೆ ಸಂವಹನದ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.
ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಮಾನವೀಯ ಸೇವೆಗೆ ಬಳಸುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ಜಾಗತಿಕ ವಾಯ್ಸ್ ಎಐ ಸಂಸ್ಥೆಯಾದ ಎಲೆವನ್ ಲ್ಯಾಬ್ಸ್ (ElevenLabs) ಜತೆ ತಿಳುವಳಿಕೆ ಒಪ್ಪಂದ ಮಾಡಿಕೊಂಡಿದೆ.

ಈ ಸಹಭಾಗಿತ್ವದ ಮೂಲಕ ಧ್ವನಿ ಕಳೆದುಕೊಂಡ ಅರ್ಹರಿಗೆ ಅವರ ಹಿಂದಿನ ಧ್ವನಿಯ (AI voices for voiceless) ಕೃತಕ ಮಾದರಿಯನ್ನು ಆಧರಿಸಿ ಮತ್ತೆ ಮಾತನಾಡಲು ಹಾಗೂ ಸಂವಹನ ನಡೆಸಲು ನೆರವಾಗುವ ತಂತ್ರಜ್ಞಾನವನ್ನು ಒದಗಿಸುವ ಉದ್ದೇಶ ಹೊಂದಲಾಗಿದೆ.
ಕನ್ನಡದಲ್ಲಿಯೂ ಈ ತಂತ್ರಜ್ಞಾನವನ್ನು ಬಳಸುವ ಅವಕಾಶ ಕಲ್ಪಿಸುವುದು ಯೋಜನೆಯ ಪ್ರಮುಖ ವಿಶೇಷತೆಯಾಗಿದೆ.
ಬೆಂಗಳೂರಿನಲ್ಲಿ ನಡೆದ ವಿಶೇಷ ಜಾಗತಿಕ ನವೋದ್ಯಮ ಮೈತ್ರಿ ಸಮಾವೇಶದಲ್ಲಿ ಈ ಒಪ್ಪಂದಕ್ಕೆ ಸಹಿ ಮಾಡಲಾಗಿದೆ. ನವೆಂಬರ್‌ನಲ್ಲಿ ನಡೆಯಲಿರುವ ಬೆಂಗಳೂರು
ತಂತ್ರಜ್ಞಾನ ಶೃಂಗಸಭೆಯ ಹಿನ್ನೆಲೆಯಲ್ಲಿ ರಾಜ್ಯದ ವಿದ್ಯುನ್ಮಾನ, ಐಟಿ, ಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕರ್ನಾಟಕ ಇನ್ನೊವೇಷನ್ ಆ್ಯಂಡ್ ಟೆಕ್ನಾಲಜಿ ಸೊಸೈಟಿಯ ಆಡಳಿತ ನಿರ್ದೇಶಕ ಡಾ. ಅವಿನಾಶ್ ಮೆನನ್ ರಾಜೇಂದ್ರನ್ (Dr. Avinash Menon Rajendran) ಮತ್ತು
ಎಲೆವನ್ ಲ್ಯಾಬ್ಸ್‌ನ ಸಿಇಒ ಮಾಟಿ ಸ್ಟಾನಿಶೆವ್‌ಸ್ಕಿ (Mati Stanishevsky) ಅವರು ಸಚಿವ ಪ್ರಿಯಾಂಕ್ ಖರ್ಗೆ ಅವರ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಿದರು.
ಧ್ವನಿ ಕಳೆದುಕೊಂಡವರಿಗೆ ಮತ್ತೆ ಸಂವಹನದ ಅವಕಾಶ ಕಲ್ಪಿಸುವುದರ ಜೊತೆಗೆ, ವಾಯ್ಸ್ ಎಐಸುರಕ್ಷತೆಗೆ ಸಂಬಂಧಿಸಿದ ಚೌಕಟ್ಟು ರೂಪಿಸುವುದು ಮತ್ತು ಸರ್ಕಾರಿ ಸೇವೆಗಳನ್ನು ಜನರಿಗೆ ಮತ್ತಷ್ಟು ಸುಲಭವಾಗಿ ತಲುಪಿಸುವುದೂ ಈ ಸಹಭಾಗಿತ್ವದ ಉದ್ದೇಶವಾಗಿದೆ.
ಈ ಯೋಜನೆಯ ಮತ್ತೊಂದು ಪ್ರಮುಖ ಅಂಶವೆಂದರೆ ಎಲೆವನ್ ಲ್ಯಾಬ್ಸ್‌ನ ‘ಒನ್ ಮಿಲಿಯನ್ ವಾಯ್ಸಸ್’ (One Million Voices) ಕಾರ್ಯಕ್ರಮ. ಇದರಡಿ ಅರ್ಹ ನಾಗರಿಕರಿಗೆ ಉಚಿತ ಜೀವಿತಾವಧಿ ಪರವಾನಗಿ ನೀಡುವ ಉದ್ದೇಶವಿದೆ.
ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ನೆರವಿನೊಂದಿಗೆ ಅಗತ್ಯವಿರುವ ಫಲಾನುಭವಿಗಳನ್ನು ಗುರುತಿಸಲಾಗುತ್ತದೆ.
ಬಾಯಿ ಅಥವಾ ಗಂಟಲು ಕ್ಯಾನ್ಸರ್ (Cancer) , ಎಎಲ್‌ಎಸ್ ಹಾಗೂ ಇತರ ನರವೈಜ್ಞಾನಿಕ ಕಾಯಿಲೆಗಳಿಂದ ಧ್ವನಿ ಕಳೆದುಕೊಂಡವರು ತಮ್ಮದೇ ಹಿಂದಿನ ಧ್ವನಿಯ ಕೃತಕ ಮಾದರಿಯನ್ನು ಬಳಸಿಕೊಂಡು ಸಂವಹನ ನಡೆಸಲು ಈ ವ್ಯವಸ್ಥೆ ನೆರವಾಗಲಿದೆ.
ವಿಶೇಷವಾಗಿ ಕನ್ನಡ ಭಾಷೆಯಲ್ಲಿಯೂ ಸಂವಹನ ನಡೆಸುವ ಸೌಲಭ್ಯ ದೊರೆಯಲಿರುವುದು ಕನ್ನಡಿಗರಿಗೆ ಮಹತ್ವದ ಅನುಕೂಲವಾಗಲಿದೆ.
AI ತಂತ್ರಜ್ಞಾನವನ್ನು ಮಾನವೀಯ ಬಳಕೆಗೆ ತರುವ ಜೊತೆಗೆ ಅದರ ದುರ್ಬಳಕೆಯನ್ನು ತಡೆಯುವ ಕ್ರಮಗಳಿಗೂ ಸರ್ಕಾರ ಒತ್ತು ನೀಡಲಿದೆ.
ಡೀಪ್‌ಫೇಕ್ ಧ್ವನಿಗಳನ್ನು ಪತ್ತೆಹಚ್ಚುವುದು, ಆಡಿಯೋ ವಾಟರ್‌ಮಾರ್ಕಿಂಗ್ (Audio Watermarking) ಮಾಡುವುದು ಮತ್ತು ಸಾರ್ವಜನಿಕ ವ್ಯಕ್ತಿಗಳು ಹಾಗೂ ಸರ್ಕಾರಿ
ಪ್ರತಿನಿಧಿಗಳ ಧ್ವನಿಯನ್ನು ಅನುಮತಿಯಿಲ್ಲದೆ ಕ್ಲೋನ್ ಮಾಡುವುದನ್ನು ತಡೆಯುವಂತಹ ಸುರಕ್ಷತಾ ಕ್ರಮಗಳನ್ನು ರೂಪಿಸುವ ಉದ್ದೇಶವಿದೆ.
ಇದಲ್ಲದೆ, ನಾಗರಿಕರ ಸಹಾಯವಾಣಿ, ಕುಂದುಕೊರತೆ ಪರಿಹಾರ ಹಾಗೂ ಸರ್ಕಾರಿ ಮಾಹಿತಿಯನ್ನು ಧ್ವನಿ ಆಧಾರಿತ ವ್ಯವಸ್ಥೆಗಳ ಮೂಲಕ ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ಒದಗಿಸುವ ಪ್ರಾಯೋಗಿಕ ಯೋಜನೆಗಳನ್ನೂ ಕೈಗೊಳ್ಳಲು ಉದ್ದೇಶಿಸಲಾಗಿದೆ.
ಹೀಗಾಗಿ ಈ ಸಹಭಾಗಿತ್ವವು ಕೇವಲ ಧ್ವನಿ ಪುನರ್‌ನಿರ್ಮಾಣಕ್ಕೆ ಸೀಮಿತವಾಗದೆ, ಸುರಕ್ಷಿತ ಮತ್ತು ಜನಸ್ನೇಹಿ ವಾಯ್ಸ್ ಎಐ ವ್ಯವಸ್ಥೆ ರೂಪಿಸುವ ಪ್ರಯತ್ನವಾಗಲಿದೆ.
ಈ ಕುರಿತು ಮಾತನಾಡಿರುವ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) , AI ತಂತ್ರಜ್ಞಾನವು ಜನರ ಬದುಕಿನಲ್ಲಿ ತರುವ ಸಕಾರಾತ್ಮಕ ಬದಲಾವಣೆಯ ಆಧಾರದ ಮೇಲೆ ಅದರ ಮೌಲ್ಯವನ್ನು ನಿರ್ಧರಿಸಬೇಕು ಎಂದು ಹೇಳಿದ್ದಾರೆ.
ಪ್ರತಿಯೊಬ್ಬ ನಾಗರಿಕನಿಗೂ ಸರ್ಕಾರದ ಸೇವೆಗಳನ್ನು ಸುಲಭವಾಗಿ ತಲುಪಿಸುವುದರ ಜೊತೆಗೆ ವಾಯ್ಸ್ ಎಐ ಸುರಕ್ಷತೆಗೆ ಬಲವಾದ ನೀತಿ ರೂಪಿಸಲು ಈ ಸಹಯೋಗ
ನೆರವಾಗಲಿದೆ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ. ಎಲೆವನ್ ಲ್ಯಾಬ್ಸ್ ಸಿಇಒ ಮಾಟಿ ಸ್ಟಾನಿಶೆವ್‌ಸ್ಕಿ ಕೂಡ ಈ ಸಹಭಾಗಿತ್ವದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಧ್ವನಿ ಕಳೆದುಕೊಂಡವರಿಗೆ ತಂತ್ರಜ್ಞಾನದ ಮೂಲಕ ಮತ್ತೆ ಸಂವಹನದ ದಾರಿ ತೆರೆಯುವ ಈ ಯೋಜನೆ, AIಯನ್ನು ಕೇವಲ ತಾಂತ್ರಿಕ ಸಾಧನವಾಗಿ ನೋಡದೆ ಮಾನವ ಜೀವನಕ್ಕೆ ನೇರವಾಗಿ ನೆರವಾಗುವ ಸಾಧನವಾಗಿ ಬಳಸುವ ಕರ್ನಾಟಕದ ಪ್ರಯತ್ನಕ್ಕೆ ಹೊಸ ಆಯಾಮ ನೀಡಿದೆ.
ಇದನ್ನು ಓದಿ : https://vijayatimes.com/congress-master-plan-for-sir-controversy/