‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ಸಂಘಟನೆಯನ್ನು ನಿಷೇಧ ಮಾಡಲು ಕೇಂದ್ರ ಗೃಹ ಇಲಾಖೆ ಗಂಭೀರ ಚಿಂತನೆ ನಡೆಸಿದೆ. ಈ ಕುರಿತು ಸಮಗ್ರ ಮಾಹಿತಿಯನ್ನು ಕಲೆ ಹಾಕುತ್ತಿದೆ. ಪಿಎಫ್‍ಐ ಮೇಲಿರುವ ಪ್ರಕರಣಗಳ ಮಾಹಿತಿ ನೀಡುವಂತೆ ಕೆಲ ರಾಜ್ಯಗಳಿಗೆ ಗೃಹ ಇಲಾಖೆ ಸೂಚಿಸಿದೆ ಎನ್ನಲಾಗಿದೆ.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ನಿಷೇಧ ಮಾಡಬೇಕೆಂದು ಅನೇಕ ರಾಜ್ಯ ಸರ್ಕಾರಗಳು ಮತ್ತು ಸಂಘಟನೆಗಳು ಗೃಹ ಇಲಾಖೆಗೆ ಪತ್ರ ಬರೆದಿದ್ದವು, ಈ ಕುರಿತು ಕ್ರಮಕ್ಕೆ ಮುಂದಾಗಿರುವ ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿ ಅಜಯ್‍ಕುಮಾರ್ ಭಲ್ಲಾ ನಿಷೇಧಕ್ಕೆ ಬೇಕಾದ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಮೌಖಿಕ ಸೂಚನೆ ನೀಡಿದ್ದಾರೆ. ಹೀಗಾಗಿಯೇ ಗೃಹ ಇಲಾಖೆಯ ಅಧಿಕಾರಿಗಳು ಕರ್ನಾಟಕ, ಕೇರಳ, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ಕೆಲ ರಾಜ್ಯಗಳಿಗೆ ಪತ್ರ ಬರೆದು ಈ ಸಂಘಟನೆ ಮೇಲಿರುವ ಪ್ರಕರಣಗಳ ಸಮಗ್ರ ಮಾಹಿತಿ ನೀಡುವಂತೆ ಕೇಳಿದ್ದಾರೆ.
ಇನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸಂಘಟನೆ ಮೇಲೆ ಶಾಂತಿ ಕದಡುವುದು, ಭಯೋತ್ಪಾದನೆಗೆ ಬೆಂಬಲ, ಕೋಮು ಪ್ರಚೋದನೆ, ವೈಷಮ್ಯ ಬಿತ್ತುವುದು, ಇಸ್ಲಾಂ ಮೂಲಭೂತವಾದಕ್ಕೆ ಬೆಂಬಲ ಸೇರಿದಂತೆ ಅನೇಕ ಗಂಭೀರ ಆರೋಪಗಳು ಈ ಸಂಘಟನೆ ಮೇಲಿವೆ. ದಕ್ಷಿಣ ಭಾರತದಲ್ಲಿ ಹೆಚ್ಚು ಸಕ್ರಿಯವಾಗಿರುವ ಈ ಸಂಘಟನೆಯನ್ನು ನಿಷೇಧಿಸಬೇಕೆಂದು ಕರ್ನಾಟಕ ರಾಜ್ಯವು ಅನೇಕ ಬಾರಿ ಕೇಂದ್ರ ಗೃಹ ಇಲಾಖೆಯನ್ನು ಒತ್ತಾಯಿಸಿತ್ತು.

ಇನ್ನು ಈ ಕುರಿತು ಸಮಗ್ರ ವರದಿ ಸಲ್ಲಿಕೆಯಾದ ನಂತರ ಪಿಎಫ್‍ಐ ಸಂಘಟನೆಯನ್ನು ನಿಷೇಧಿಸಲು ಗೃಹ ಇಲಾಖೆ ಎಲ್ಲ ಸಿದ್ದತೆಗಳನ್ನು ಮಾಡಿಕೊಂಡಿದೆ. ಈವರೆಗೂ ಭಾರತದಲ್ಲಿ ಭಯೋತ್ಪಾದನಾ ಚಟುವಟಿಕೆಗಳಿಗೆ ನೆರವು ನೀಡುವ 42 ಮತ್ತು ದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಿಸುವ 11 ಸಂಘಟನೆಗಳನ್ನು ನಿಷೇಧ ಮಾಡಲಾಗಿದೆ.