ನವದೆಹಲಿ, ಫೆ. 06: ಇತ್ತೀಚೆಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ರೈತ ವಿರೋಧಿ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ದೆಹಲಿ ಗಡಿಯಲ್ಲಿ ಹೋರಾಟ ಮಾಡುತ್ತಿರುವ ರೈತರು ‘ಕೇಂದ್ರ ಸರ್ಕಾರ ಮತ್ತು ಪೊಲೀಸರು ತಮಗೆ ನೀಡುತ್ತಿರುವ ಕಿರುಕುಳಗಳನ್ನು ನಿಲ್ಲಿಸುವವರೆಗೆ ಸರ್ಕಾರದ ಜೊತೆ ಯಾವುದೇ ರೀತಿಯ ಮಾತುಕತೆ ನಡೆಸಲು ಸಾಧ್ಯವಿಲ್ಲ’ ಎಂದು ಹೇಳಿದ್ದರು. ಇದೀಗ ಇಂದು ‘ಚಕ್ಕಾ ಜಾಮ್’ ನಡೆಸುವುದಾಗಿ ಘೋಷಿಸಿದ್ದಾರೆ. ಜೊತೆಗೆ ಚಕ್ಕಾ ಜಾಮ್ ವೇಳೆ ಸಿಲುಕುವ ನಾಗರಿಕರಿಗೆ ಈ ಸಮಸ್ಯೆ ಉಂಟಾಗಲು ಕೇಂದ್ರ ಸರ್ಕಾರ ಯಾವ ರೀತಿ ಕಾರಣ ಎಂಬುದನ್ನು ತಿಳಿಸಿಕೊಡಲು ಮುಂದಾಗಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಸಂಯುಕ್ತ ಕಿಸಾನ್ ಮೋರ್ಚಾ, ಫೆಬ್ರವರಿ 6ರಂದು ದೇಶಾದ್ಯಂತ ‘ಚಕ್ಕಾ ಜಾಮ್’ ನಡೆಯಲಿದೆ. ಆದರೆ ಕಬ್ಬಿನ ಕಟಾವಿನ ಸಮಯ ಆಗಿರುವುದರಿಂದ ಉತ್ತರ ಪ್ರದೇಶ ಮತ್ತು ಉತ್ತರಖಾಂಡ ರಾಜ್ಯಗಳಲ್ಲಿ ಹಾಗೈ ಈಗಾಗಲೇ ದೆಹಲಿ ಗಡಿಗಳಲ್ಲಿ ಪ್ರತಿಭಟನೆ ನಡೆಯುತ್ತಿರುವುದರಿಂದ ದೆಹಲಿ ಮತ್ತು ಎನ್ ಸಿ ಆರ್ ಪ್ರದೇಶಗಳಲ್ಲಿ ಹೆದ್ದಾರಿ ತಡೆ ನಡೆಸುವುದಿಲ್ಲ ಎಂದು ತಿಳಿಸಿದೆ. ಚಕ್ಕಾ ಜಾಮ್ ವೇಳೆ ಸಿಲುಕುವ ನಾಗರಿಕರಿಗೆ ಅಲ್ಲಿಯೇ ನೀರು ಮತ್ತು ಆಹಾರ ಪೂರೈಸಲಾಗುವುದು. ಜೊತೆಗೆ ಇಂಥ ಸಮಸ್ಯೆ ಸೃಷ್ಟಿಯಾಗಲು ಕೇಂದ್ರ ಸರ್ಕಾರ ಕಾರಣ ಎಂಬುದನ್ನು ಮನವರಿಕೆ ಮಾಡಲಾಗುವುದು ಎಂದು ಹೇಳಿದೆ.
ಈಗಾಗಲೇ ಕೇಂದ್ರ ಸರ್ಕಾರ ಮತ್ತು ಹೋರಾಟ ನಡೆಸುತ್ತಿರುವ ರೈತ ಸಂಘಟನೆಗಳ ಪದಾಧಿಕಾರಿಗಳ ಜೊತೆ 11 ಸುತ್ತು ಮಾತುಕತೆ ಆಗಿ ಅಷ್ಟೂ ಸುತ್ತಿನ ಮಾತುಕತೆಗಳು ವಿಫಲವಾಗಿವೆ. ರೈತರು ಮೂರು ರೈತ ವಿರೋಧಿ ಕೃಷಿ ಕಾನೂನುಗಳನ್ನು ಹಿಂಪಡೆಯಬೇಕು ಎಂಬ ತಮ್ಮ ನಿಲುವಿನಲ್ಲಿ ಬದಲಾವಣೆ ಇಲ್ಲ. ತಾವು ಹೋರಾಟವನ್ನು ತೀವ್ರಗೊಳಿಸುವುದಾಗಿ ಹೇಳಿದ್ದಾರೆ.
ರೈತರ ಹೋರಾಟದ ಕಾವು ಹೆಚ್ಚುತ್ತಿರುವುದರಿಂದ ಕೇಂದ್ರ ಸರ್ಕಾರ ಈಗ ರೈತರ ಜೊತೆ ಔಪಚಾರಿಕ ಚರ್ಚೆ ನಡೆಸುವ ಪ್ರಯತ್ನ ಮಾಡುತ್ತಿದೆ. ಆದರೆ ರೈತ ಸಂಘಟನೆಗಳನ್ನು ಮುನ್ನಡೆಸುತ್ತಿರುವ ಸಂಯುಕ್ತ್ ಕಿಸಾನ್ ಮೋರ್ಚಾ, ಕೇಂದ್ರ ಸರ್ಕಾರ ಮತ್ತು ಪೊಲೀಸರು ತಮಗೆ ನೀಡುತ್ತಿರುವ ಕಿರುಕುಳಗಳನ್ನು ನಿಲ್ಲಿಸುವವರೆಗೆ ಕೇಂದ್ರ ಸರ್ಕಾರದ ಜೊತೆ ಯಾವುದೇ ರೀತಿಯ ಮಾತುಕತೆ ನಡೆಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
ರೈತರು ದೆಹಲಿ ಪ್ರವೇಶ ಮಾಡುತ್ತಾರೆ ಎನ್ನುವ ಕಾರಣಕ್ಕೆ ಪ್ರತಿಭಟನೆ ನಡೆಯುತ್ತಿರುವ ರಸ್ತೆಗಳಲ್ಲಿ ಹಲವು ಸುತ್ತಿನ ಬ್ಯಾರಿಕೇಡ್ ಹಾಕಲಾಗಿದೆ. ಅದರ ಮೇಲೆ ಮುಳ್ಳು ತಂತಿ ಬೇಲಿಗಳನ್ನು ಹಾಕಲಾಗಿದೆ. ರಸ್ತೆಗಳಲ್ಲಿ ಕಂದಕ ಸೃಷ್ಟಿಸಲಾಗಿದೆ. ಭಾರೀ ಜನರಿರುವ ಕಡೆ ದೊಡ್ಡ ಮಟ್ಟದ ಅಪಾಯ ತಂದೊಡ್ಡಬಹುದು ಎಂಬ ಪರಿವೆಯೇ ಇಲ್ಲದೆ ರಸ್ತೆಗಳಲ್ಲಿ ಮೊಳೆಗಳನ್ನು ನೆಡಲಾಗಿದೆ. ಜೊತೆಗೆ ತಾತ್ಕಾಲಿಕವಾಗಿ ಇಂಟರ್ನೆಟ್, ಕರೆಂಟ್ ಮತ್ತು ನೀರನ್ನು ಸ್ಥಗಿತಗೊಳಿಸಲಾಗುತ್ತಿದೆ. ಹೀಗೆ ತೊಂದರೆ ಕೊಡುತ್ತಿರುವ ಹಿನ್ನೆಲೆಯಲ್ಲಿ ‘ಮಾತುಕತೆ ವಿರೋಧಿಸಿ’ ಸಂಯುಕ್ತ್ ಕಿಸಾನ್ ಮೋರ್ಚಾ ಹೇಳಿಕೆ ಬಿಡುಗಡೆ ಮಾಡಿದೆ. ಇದಲ್ಲದೆ ರೈತ ವಿರೋಧಿಯಾಗಿರುವ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯಬೇಕು ಎಂಬುದನ್ನು ಬಿಟ್ಟು, ರೈತರು ಕೇಂದ್ರ ಸರ್ಕಾರದಿಂದ ಮತ್ತೆ ಇನ್ನೇನನ್ನೂ ನಿರೀಕ್ಷೆ ಮಾಡುವುದಿಲ್ಲ ಎಂಬುದಾಗಿಯೂ ಸಂಯುಕ್ತ್ ಕಿಸಾನ್ ಮೋರ್ಚಾ ಸ್ಪಷ್ಟಪಡಿಸಿದೆ.