ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್(Mohammud Nalpad) ವಿರುದ್ದ ಗಂಭೀರ ಆರೋಪವೊಂದು ಕಾಂಗ್ರೆಸ್(Congress) ಪಕ್ಷದಲ್ಲೇ ಕೇಳಿಬಂದಿದೆ.

ಸದಾ ವಿವಾದಗಳಿಂದಲೇ ಸುದ್ದಿಯಾಗುತ್ತಿರುವ ನಲಪಾಡ್ ವಿರುದ್ದ ಸ್ವಪಕ್ಷೀಯರೇ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್(DK Shivkumar) ಅವರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ. ಬೆಂಗಳೂರು ಶಿಕ್ಷಕರ ಕ್ಷೇತ್ರದ ಪರಾಜಿತ ಅಭ್ಯರ್ಥಿ ಪ್ರವೀಣ್ ಪೀಟರ್ ಅವರಿಗೆ ಮೊಹಮ್ಮದ್ ನಲಪಾಡ್ ಮತ್ತು ಅವರ ಬೆಂಬಲಿಗರು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ಕುರಿತು ಪ್ರವೀಣ್ ಪೀಟರ್, ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ದೂರು ನೀಡಿದ್ದು, ನನಗೆ ನಲಪಾಡ್ ಬೆಂಬಲಿಗರು ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾರೆ.
ನನಗೆ ಸೂಕ್ತ ರಕ್ಷಣೆ ನೀಡಬೇಕೆಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ. ನವ ಸಂಕಲ್ಪ ಶಿಬಿರದಲ್ಲಿ ಕೃಷ್ಣಭೈರೇಗೌಡ ನೇತೃತ್ವದಲ್ಲಿ ಯುವಕರನ್ನು ಕಾಂಗ್ರೆಸ್ ಪಕ್ಷದತ್ತ ಹೇಗೆ ಸೆಳೆಯಬೇಕು ಎಂಬುದರ ಕುರಿತು ಚರ್ಚೆ ನಡೆಯುತ್ತಿತ್ತು. ಈ ವೇಳೆ ಮಾತನಾಡಿದ್ದ ಪ್ರವೀಣ್ ಪೀಟರ್, ಯುವಕರನ್ನು ಕಾಂಗ್ರೆಸ್ನತ್ತ ಸೆಳೆಯಲು ಯುವ ಕಾಂಗ್ರೆಸ್ ಅಧ್ಯಕ್ಷರಿಗೆ ಒಳ್ಳೆಯ ಇಮೇಜ್ ಇರಬೇಕು. ಹೀಗೆ ಒಳ್ಳೆಯ ಇಮೇಜ್ ಇದ್ದರೆ ಸುಲಭವಾಗಿ ಯುವಕರನ್ನು ಪಕ್ಷದತ್ತ ಸೆಳೆಯಬಹುದು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಆದರೆ ಇದರಿಂದ ಕೆರಳಿದ ಯುವ ಕಾಂಗ್ರೆಸ್ ಅಧ್ಯಕ್ಷ ನಲಪಾಡ್, ನೀನು ನನ್ನನ್ನು ಗುರಿಯಾಗಿಸಿಕೊಂಡು ಈ ರೀತಿಯಾಗಿ ಮಾತನಾಡುತ್ತಿರುವೆ ಎಂದು ಅಸಮಾಧಾನ ಹೊರಹಾಕಿದ್ದರು. ಶಿಬಿರ ಮುಗಿದ ನಂತರ ನನಗೆ ನಲಪಾಡ್ ಬೆಂಬಲಿಗರಿಂದ ಬೆದರಿಕೆ ಕರೆಗಳು ಬರುತ್ತಿವೆ ಎಂದು ಪ್ರವೀಣ್ ಪೀಟರ್ ದೂರು ನೀಡಿದ್ದಾರೆ. ಇನ್ನು ಈ ಕುರಿತು ನಲಪಾಡ್ ಅವರನ್ನು ಪ್ರಶ್ನಿಸಿದಾಗ, ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.