ಮೈಸೂರು, ಮಾ. 02: ಸಾಂಸ್ಕ್ರತಿಕ ನಗರಿ ಮೈಸೂರಿಗೆ ದೇಶ-ವಿದೇಶದ ಮತ್ತಷ್ಟು ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಲಂಡನ್ನಿನ ಬಿಗ್ ಬಸ್ ಮಾದರಿಯಲ್ಲಿ ಡಬ್ಬಲ್ ಡೆಕ್ಕರ್ ತೆರೆದ ‘ಅಂಬಾರಿ’ ಬಸ್ ಸೇವೆ ಆರಂಭವಾಗಲಿದೆ.
ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಇಂದು ನಡೆಯುವ ಸಮಾರಂಭದಲ್ಲಿ ಡಬ್ಬಲ್ ಡೆಕ್ಕರ್ ಅಂಬಾರಿ ಬಸ್ ಸಂಚಾರಕ್ಕೆ ವಿದ್ಯುಕ್ತ ಚಾಲನೆ ದೊರೆಯಲಿದ್ದು, ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ಅವರು ಅಂಬಾರಿ ಬಸ್ ಸೇವೆಗೆ ಹಸಿರು ನಿಶಾನೆ ನೀಡಲಿದ್ದಾರೆ.
ಮೈಸೂರಿನ ಹೋಯ್ಸಳ ಹೋಟೆಲ್ ನಿಂದ ಹೊರಡುವ ‘ಅಂಬಾರಿ’ ಜಿಲ್ಲಾಧಿಕಾರಿ ಕಛೇರಿ, ಕ್ರಾಫರ್ಡ್ ಹಾಲ್, ಕುಕ್ಕರಹಳ್ಳಿಕೆರೆ, ಮೈಸೂರು ವಿಶ್ವ ವಿದ್ಯಾನಿಲಯ, ಜಾನಪದ ವಸ್ತು ಪ್ರದರ್ಶನ, ರಾಮಾಸ್ವಾಮಿ ಸರ್ಕಲ್, ಅರಮನೆ ಕರಿಕಲ್ಲು ತೊಟ್ಟಿ, ಜಯಮಾರ್ತಾಂಡ ದ್ವಾರ, ಮೃಗಾಲಯ, ಕಾರಂಜಿ ಕೆರೆ, ಸಂಗೊಳ್ಳಿ ರಾಯಣ್ಣ ಸರ್ಕಲ್, ಚಾಮುಂಡಿ ವಿಹಾರ ಸ್ಟೇಡಿಯಂ, ಸೈಂಟ್ ಫಿಲೋಮಿನಾ ಚರ್ಚ್, ಬನ್ನಿಮಂಟಪ, ರೈಲ್ವೆ ಸ್ಟೇಷನ್ ನಿಂದ ಮತ್ತೆ ಮಯೂರ ಹೋಯ್ಸಳ ಹೋಟೆಲ್ ಗೆ ಬರಲಿದೆ.
ಕಳೆದ ಬಾರಿಯ ರಾಜ್ಯ ಬಜೆಟ್ ವೇಳೆ ‘ಅಂಬಾರಿ’ ಬಸ್ ಗಾಗಿ ಐದು ಕೋಟಿ ರೂಪಾಯಿ ಮೀಸಲಿಡಲಾಗಿತ್ತು. ಲಂಡನ್ ನಲ್ಲಿರುವ ಬಿಗ್ ಬಾಸ್ ಮಾದರಿಯಲ್ಲಿ ‘ಅಂಬಾರಿ’ ಬಸ್ ನ್ನು ವಿನೂತನ ಶೈಲಿಯಲ್ಲಿ ನಿರ್ಮಿಸಲಾಗಿದೆ. ಪ್ರತಿ ಅರ್ಧ ಗಂಟೆಗೊಮ್ಮೆ ‘ಅಂಬಾರಿ’ ಬಸ್ ಸಂಚಾರದ ವ್ಯವಸ್ಥೆ ಇರುತ್ತದೆ. ಒಬ್ಬ ವ್ಯಕ್ತಿಗೆ 250 ರೂ.ಗಳನ್ನು ನಿಗದಿ ಮಾಡಲಾಗಿದೆ.